ಹಾಸನ,ಮಾ 28 (MSP): ಆದಾಯ ತೆರಿಗೆ ಇಲಾಖೆಯು ನಡೆಸಿರೋ ಈ ದಾಳಿಗೆ ನಾವು ಹೆದರುವವರಲ್ಲ, ಒಂದು ವೇಳೆ ಇದಕ್ಕೆಲ್ಲಾ ಹೆದರಿದ್ರೆ ನಾವು ಎಂದೋ ಮನೆ ಬಿಟ್ಟು ಹೋಗಬೇಕಾಗಿತ್ತು. ನಮ್ಮನ್ನು ಗುರಿಯಾಗಿಯಾಗಿಸಿ ಐಟಿ ಇಲಾಖೆ ಮಾಡುತ್ತಿರುವ ರಾಜಕೀಯ ಪ್ರೇರಿತ ದಾಳಿಯನ್ನು ವಿರೋಧಿಸಿ ನವದೆಹಲಿ ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದಂತೆ ನಮ್ಮ ಪ್ರತಿಭಟನೆ ನಡೆಯಲಿದೆ ಎಂದು ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಈ ಬಗ್ಗೆ ಮಾ.28 ರ ಗುರುವಾರ ಹೊಳೆನರಸೀಪುರದಲ್ಲಿ ಪ್ರತಿಕ್ರಿಯಿಸಿದ ಸಚಿವ ಎಚ್.ಡಿ. ರೇವಣ್ಣ, ಆದಾಯ ತೆರಿಗೆ ಇಲಾಖೆ ಮುಖ್ಯಸ್ಥ ಬಿಜೆಪಿಯ ಏಜೆಂಟ್ ಆಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಐಟಿ ಮುಖ್ಯಸ್ಥ ಸೇರ್ಪಡೆಯಾಗುವುದು ಒಳಿತು. ಬಳಿಕ ಬಿಜೆಪಿಯಿಂದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಲಿ ಎಂದು ಕಿಡಿಕಾರಿದರು.
ಐಟಿ ರೇಡ್ ಗೆ ನಾವು ಭಯಪಡುವವರಲ್ಲ, ಬಿಜೆಪಿಗೆ ಅಂತ್ಯ ಕಾಲ ಸಮೀಪಿಸಿದೆ ಎಂದು ಸಚಿವ ಪುಟ್ಟರಾಜು ಹಾಗೂ ಇತರರ ಮನೆ ಮೇಲೆ ನಡೆದ ಐಟಿ ದಾಳಿ ಖಂಡಿಸಿದರು.