ಹೊಸದಿಲ್ಲಿ, ಮಾ28(SS): ರಾಹುಲ್ ಗಾಂಧಿಯನ್ನು ಚಿಕ್ಕ ಹುಡುಗ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕರೆದಿದ್ದಾರೆ. ಇದೀಗ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಚುನಾವಣೆ ರ್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿಎಂ ಮಮತಾ ಬ್ಯಾನರ್ಜಿಯನ್ನು ಟೀಕೆ ಮಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು.
ಒಂದು ಕಡೆ ಮೋದಿ ಜೀ ಸುಳ್ಳುಗಳನ್ನು ಹೇಳುತ್ತಿರುತ್ತಾರೆ ಹಾಗೂ ಮತ್ತೊಂದು ಕಡೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಕೇವಲ ಭರವಸೆಗಳನ್ನು ನೀಡುತ್ತಿರುತ್ತಾರೆ. ಆದರೆ, ಅದ್ಯಾವುದೂ ನಡೆಯುವುದಿಲ್ಲ ಎಂದು ಟೀಕೆ ಮಾಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ''ಚಿಕ್ಕ ಹುಡುಗ ಏನೋ ಹೇಳಿದ್ದಾರೆ. ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ'' ಎಂದು ಹೇಳಿದ್ದಾರೆ.
ಇದೀಗ ಮಮತಾ ಬ್ಯಾನರ್ಜಿ ಹೇಳಿಕೆ ನೆಟ್ಟಿಗರ ದಾಳಿಗೆ ಗುರಿಯಾಗಿದೆ. ರಾಹುಲ್ ಗಾಂಧಿಯನ್ನು ಚಿಕ್ಕ ಹುಡುಗ ಎಂದು ಕರೆದಿದ್ದಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ನೆಟ್ಟಿಗರು ಹಾಸ್ಯಭರಿತವಾಗಿ ರಾಹುಲ್ ಗಾಂಧಿ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ.