ಬೆಂಗಳೂರು, ಮಾ28(SS): ಕೇವಲ ಕಾಂಗ್ರೆಸ್ – ಜೆಡಿಎಸ್ ಮಾತ್ರವಲ್ಲ, ಬಿಜೆಪಿ ಅವರ ಮೇಲೂ ಐಟಿ ದಾಳಿ ಮಾಡಲಿ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ – ಜೆಡಿಎಸ್ ಸಚಿವರ, ಶಾಸಕರ ಮೇಲೆ ದಾಳಿ ಸರಿಯಲ್ಲ. ತೆರಿಗೆ ಇಲಾಖೆಗೆ ದಾಳಿ ಮಾಡುವ ಅವಕಾಶ ಇದೆ. ಆದರೆ ಇದು ಸಮಯ ಸೂಕ್ತವಲ್ಲ. ಚುನಾವಣಾ ಹೊಸ್ತಿಲಲ್ಲಿ, ನೀತಿ ಸಂಹಿತೆ ಬಂದಿದೆ. ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಐಟಿ ರೇಡ್ ಮಾಡುತ್ತಿರುವುದು ಉದ್ದೇಶ ಪೂರ್ವಕ, ರಾಜಕೀಯ ಪ್ರೇರಿತ ಎಂದು ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ.
ನಾನು ಐಟಿ ಇಲಾಖೆಯಲ್ಲಿ ಇಲ್ಲ. ಸಿಎಂಗೆ ಯಾರೋ ಮಾಹಿತಿ ನೀಡಿರಬಹುದು. ನನಗೆ ಐಟಿ ದಾಳಿ ನಡೆಯುವುದರ ಬಗ್ಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಮೇಲೆ ಐಟಿ ದಾಳಿ ಆಗುತ್ತಾ ಎಂಬ ವಿಷಯ ನನಗೆ ಗೊತ್ತಿಲ್ಲ. ಈ ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.
ಚುನಾವಣಾ ಸಮಯದಲ್ಲಿ ಐಟಿ ಇಲಾಖೆ ಕೀಳು ಮಟ್ಟಕ್ಕೆ ಕುಸಿದಿದೆ. ಕಾಂಗ್ರೆಸ್- ಜೆಡಿಎಸ್ ಸಚಿವರ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಲಿ ಎಂದು ಈ ರೀತಿ ಮಾಡುತ್ತಿದ್ದಾರೆ. ದಾಳಿ ಕೇವಲ ಕಾಂಗ್ರೆಸ್ – ಜೆಡಿಎಸ್ ಮಾತ್ರವಲ್ಲ, ಬಿಜೆಪಿ ಅವರ ಮೇಲೂ ದಾಳಿ ಮಾಡಬಹುದಿತ್ತು ಎಂದು ತಿಳಿಸಿದ್ದಾರೆ.