ನವದೆಹಲಿ,ಮಾ 28 (MSP): ಬಾಹ್ಯಾಕಾಶದಲ್ಲಿರುವ ಸಜೀವ ಉಪಗ್ರಹವನ್ನು ಮಿಸೈಲ್ ಮೂಲಕ ಹೊಡೆದುರಿಳಿಸುವ ತಂತ್ರಜ್ಞಾನ ಮಿಷನ್ ಶಕ್ತಿ ಯಶಸ್ವಿಯಾದ ಹಿನ್ನಲೆಯಲ್ಲಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ವಿರೋಧ ಪಕ್ಷಗಳು ಚುನಾವಣಾ ಆಯೋಗ ರಚಿಸಿರುವ ಕಣ್ಗಾವಲು ಸಮಿತಿಗೆ ದೂರು ನೀಡಿದೆ.
"ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್ ಡಿಓ ) ಅಭಿವೃದ್ದಿಪಡಿಸಿದ ಉಪಗ್ರಹ ಕ್ಷಿಪಣಿ ಪ್ರತಿರೋಧಿ ಅಸ್ತ್ರ ’ ಮಿಷನ್ ಶಕ್ತಿ’ ಪ್ರಯೋಗದ ಬಳಿಕ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣ ಪ್ರಚಾರ ಗಿಟ್ಟಿಸಿಕೊಳ್ಳುವ ಮತ್ತೊಂದು ನಾಟಕವಷ್ಟೇ. ಆಡಳಿತ ಅವಧಿ ಮುಗಿಯುತ್ತಿರುವ ಸರ್ಕಾರಕ್ಕೆ ತರಾತುರಿಯಾ ಭಾಷಣ ಪ್ರಕಟಿಸುವ ಅಗತ್ಯವಿತ್ತೇ? ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಹಾಗೂ ತೃಣ ಮೂಲ ಕಾಂಗ್ರೆಸ್ ಪಕ್ಷವೂ ಪ್ರಧಾನಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದೆ ಎಂದು ಬುಧವಾರದಂದೇ ಕಿಡಿಕಾರಿದ್ದರು.
ವಿರೋಧ ಪಕ್ಷಗಳು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗದ ವಕ್ತಾರ ಶೈಪಾಲಿ ಶರಣ್, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ತಕ್ಷಣವೇ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಚುನಾವಣಾ ಆಯೋಗವು ನಿರ್ದೇಶಿಸಿದೆ ಎಂದಿದ್ದಾರೆ.