ನವದೆಹಲಿ, ಮಾ28(SS): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪತ್ರಕರ್ತರೊಬ್ಬರನ್ನು ರಕ್ಷಿಸಿ, ಆಸ್ಪತ್ರೆ ಸೇರಿಸಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.
ರಸ್ತೆ ದಾಟುತ್ತಿದ್ದಾಗ ರಾಜಸ್ಥಾನ ಮೂಲದ ಪತ್ರಕರ್ತರಾದ ರಾಜೇಂದ್ರ ವ್ಯಾಸ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಗಾಯಗೊಂಡಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬರುತ್ತಿದ್ದ ರಾಹುಲ್ ಗಾಂಧಿ ಅವರು ರಾಜೇಂದ್ರ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ರಸ್ತೆ ಮಧ್ಯ ನರಳುತ್ತ ಬಿದ್ದಿದ್ದ ಪತ್ರಕರ್ತನನ್ನು ತಮ್ಮ ವಾಹನದಲ್ಲೇ ಕರೆದೊಯ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಗಾಯಾಳುಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ರಾಜೇಂದ್ರ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸುವವರೆಗೂ ಆಸ್ಪತ್ರೆಯಲ್ಲಿಯೇ ಇದ್ದು ರಾಹುಲ್ ಕಾಳಜಿ ತೋರಿಸಿದ್ದಾರೆ. ದೆಹಲಿಯ ಹುಮಾಯುನ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು.
ಇದೀಗ ರಾಹುಲ್ ಅವರ ಈ ಮಾವೀಯತೆಯ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.