ದಾವಣಗೆರೆ, ಮಾ28(SS): ಲಗ್ನ ಪತ್ರಿಕೆಯಲ್ಲಿ ಮತದಾನದ ಮಹತ್ವ ಹಾಗೂ ನರೇಂದ್ರ ಮೋದಿಗೆ ಮತ ಹಾಕುವಂತೆ ಮನವಿ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಒಂದೆಡೆ,ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಮುಖ ಪಕ್ಷಗಳು ಇದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಮೋದಿ ಪರ ಪ್ರಚಾರ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವ ಮತವೇ ನಮಗೆ ನೀಡುವ ಉಡುಗೊರೆ ಎಂದು ವಧುವಿನ ತಂದೆಯೊಬ್ಬರು ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ಟಿಂಕರ್ ಮಂಜಣ್ಣ ‘ ಮೋದಿ ಅವರಿಗೆ ನೀಡುವ ಮತವೇ ನಮಗೆ ನೀಡುವ ಉಡುಗೊರೆ ’ ಎಂದು ಲಗ್ನ ಪತ್ರಿಕೆ ಮುದ್ರಿಸಿದವರು.
ಇವರು ಮೋದಿ ಅಭಿಮಾನಿಯಾಗಿದ್ದು, ತಮ್ಮ ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ “2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನೀಡುವ ಮತವೇ ನಮಗೆ ಕೊಡುವ ಉಡುಗೊರೆ” ಎಂದು ಮುದ್ರಿಸಿದ್ದಾರೆ. ವಿಶೇಷವೆಂದರೆ, ಲಗ್ನ ಪತ್ರಿಕೆಯಲ್ಲಿ ಮುದ್ರಿಸಿದಂತೆ ಮಂಜಣ್ಣ ಅವರು ತಮ್ಮ ಮಗಳ ಮದುವೆಯಲ್ಲಿ ಯಾವುದೇ ಉಡುಗೊರೆ ಸ್ವೀಕರಿಸಿಲ್ಲ.
ಮಂಜಣ್ಣ ದಾವಣಗೆರೆ ನಗರದ ಕೆಬಿ ಬಡಾವಣೆ ನಿವಾಸಿಯಾಗಿದ್ದು, ಇಂದು ಅವರ ಮಗಳು ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಗರದ ಪಿಬಿ ರಸ್ತೆಯಲ್ಲಿ ಇರುವ ರೇಣುಕ ಮಂದಿರದಲ್ಲಿ ಇಂದು (ಮಾ.28) ಅವಿನಾಶ್ ಬಣಕಾರ ಜೊತೆ ವಧು ಕಾವ್ಯಾ ಸಪ್ತಪದಿ ತುಳಿದಿದ್ದಾರೆ.
ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮೋದಿ ಪರ ಅಭಿಮಾನಿಗಳು ಘೋಷನೆ ಕೂಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯ ಚಟುವಟಿಕೆಗಳ ಮೇಲೆ ಚುನಾವಣಾ ಆಯೋಗದ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.