ಬೆಂಗಳೂರು,ಮಾ 28(MSP): ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆದಾಯ ತೆರಿಗೆ ಇಲಾಖೆ ವಿರುದ್ದ ಮಾಡಿರುವ ಗಂಭೀರ ಆರೋಪಕ್ಕೆ ಐಟಿ ಇಲಾಖೆ ಗುರುವಾರ ಸ್ಪಷ್ಟನೆ ನೀಡಿದೆ. ಐಟಿ ಇಲಾಖೆಯೂ, ಯಾವೊಬ್ಬ ಶಾಸಕ, ಸಂಸದ, ಸಚಿವರ ನಿವಾಸ ಅಥವಾ ಕಚೇರಿ ಮೇಲೆ ದಾಳಿ ನಡೆಸಿಲ್ಲ ಎಂದು ಸಿಎಂ ಆರೋಪಕ್ಕೆ ಇಲಾಖೆ ತಿರುಗೇಟು ನೀಡಿದೆ.
ತೆರಿಗೆ ಇಲಾಖೆ ಮುಂದೆ ಪ್ರತಿಭಟನೆ
ತೆರಿಗೆ ಪಾವತಿಸದೆ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲ ಗುತ್ತಿಗೆದಾರರು ಹಾಗೂ ಅವರಿಗೆ ಸಂಬಂಧಿಸಿದ ವ್ಯಕ್ತಿಗಳ ನಿವಾಸ ಹಾಗೂ ಕಚೇರಿ ಮೇಲೆ ಪರಿಶೀಲನೆಗಾಗಿ ಶೋಧ ನಡೆಸಲಾಗಿದೆ ಹೊರತು, ಯಾವ ಸಚಿವ ಶಾಸಕರ ನಿವಾಸದ ಮೇಲೆ ಐಟಿ ರೇಡ್ ನಡೆದಿಲ್ಲ ಕೇಂದ್ರ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
ಗುರುವಾರದಂದು, ಕರ್ನಾಟಕದಲ್ಲಿ ಆಡಳಿತದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರದ ಮುಖಂಡರು ಆದಾಯ ತೆರಿಗೆ ಇಲಾಖೆ ಮುಂದೆ ಮುಷ್ಕರ ನಡೆಸುತ್ತಿರುವ ಬೆನ್ನಲ್ಲೇ ಈ ಸ್ಪಷ್ಟನೆ ನೀಡಿದೆ. ಮಾತ್ರವಲ್ಲದೇ ಐಟಿ ಇಲಾಖೆಯ ಕೆಲಸಗಳಗೆ ರಾಜಕೀಯ ಬಣ್ಣ ಹಚ್ಚಬೇಡಿ. ಐಟಿ ಇಲಾಖೆ ಮಾಡಿರುವ ದಾಳಿ ವ್ಯಕ್ತಿಗತವಲ್ಲ ಎಂದಿರುವ ಇಲಾಖೆ, ಸರ್ಕಾರಿ ಆಡಳಿತ ಯಂತ್ರದಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಪ್ರಚೋದನಕಾರಿ ಹೇಳಿಕೆ ನೀಡುವುದು ಖಂಡನೀಯ ತೆರಿಗೆಯಲ್ಲಿ ಅಕ್ರಮ ಕುರಿತು ಖಚಿತ ಮಾಹಿತಿ ಪಡೆದೇ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇನ್ನು ಮುಂದೆಯೂ ಆದಾಯ ತೆರಿಗೆ ಇಲಾಖೆಯೂ ಯಾವುದೇ ರಾಜಕೀಯ ಪಕ್ಷಪಾತವಿಲ್ಲದೆ ನಿರ್ಭೀತಿಯಿಂದ ತನ್ನ ಕಾರ್ಯಾಚರಣೆಯನ್ನು ವೃತ್ತಿಪರವಾಗಿ ಮುಂದುವರಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯ ಸ್ಪಷ್ಟನೆಯಲ್ಲಿ ಹೇಳಲಾಗಿದೆ.