ಡೆಹ್ರಾಡೂನ್,ಮಾ28(AZM):12ರಹರೆಯದ ಪುಟ್ಟ ವಿದ್ಯಾರ್ಥಿಯೊಡನೆ ಹಿರಿಯ ವಿದ್ಯಾರ್ಥಿಗಳು ರಾಕ್ಷಸೀಯ ಕೃತ್ಯವೆಸಗಿ ಕೊಂದು ಹಾಕಿದ್ದಾರೆ, ಅದೂ ಅಲ್ಲದೆ ಶಾಲಾ ಆಡಳಿತ ಮಂಡಳಿಯೇ ಆ ಪುಟ್ಟ ಬಾಲಕನ ಮೃತದೇಹವನ್ನು ಶಾಲಾ ಆವರಣದಲ್ಲಿ ಸಮಾಧಿ ಮಾಡಿದ್ದಾರೆ. ಇಂತಹದೊಂದು ಕ್ರೂರ ಘಟನೆ ನಡೆದಿದ್ದು ಡೆಹ್ರಾಡೂನ್ ನ ಬೋರ್ಡಿಂಗ್ ಶಾಲೆಯಲ್ಲಿ.
ಹಾಪುರ ನಿವಾಸಿಯಾಗಿರುವ 7ನೇ ತರಗತಿಯಲ್ಲಿ ಕಲಿಯುತ್ತಿರುವ ಆ ಪುಟ್ಟ ಬಾಲಕನ ಮೇಲೆ ಕೇವಲ ಬಿಸ್ಕೆಟ್ ಕದ್ದ ಆರೋಪದ ಮೇಲೆ ಇಂತಹ ರಾಕ್ಷಸೀಯ ಕೃತ್ಯವೆಸಗಲಾಗಿದೆ. ಬಿಸ್ಕೆಟ್ ಕದ್ದ ಆರೋಪದ ಹಿನ್ನಲೆ ಶಾಲೆಯ ಆಡಳಿತ ಮಂಡಳಿ ಆತನಿಗೆ ಶಾಲೆ ಬಿಟ್ಟು ಹೋಗುವಂತೆ ಹೇಳಿತ್ತು, ನಂತರ ಅದೇ ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಲವು ಗಂಟೆವರೆಗೆ ಕ್ರಿಕೆಟ್ ಬಾಲ್ ನಿಂದ ಹಾಗೂ ವಿಕೆಟ್ ನಿಂದ ಆ ಪುಟ್ಟ ಬಾಲಕನಿಗೆ ಚೆನ್ನಾಗಿ ಥಳಿಸಿದ್ದಾರೆ, ಪರಿಣಾಮ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾದರೂ ಆಗಲೇ ಬಾಲಕ ಮೃತಪಟ್ಟಿದ್ದನು ಎನ್ನಲಾಗಿದೆ. ಹಾಗಾಗಿ ಶಾಲಾ ಆಡಳಿತ ಮಂಡಳಿಯೇ ಬಾಲಕನ ಮೃತದೇಹವನ್ನು ಶಾಲಾ ಆವರಣದಲ್ಲಿ ಸಮಾಧಿ ಮಾಡಿ ವಿಷಯವನ್ನು ಮುಚ್ಚಿ ಹಾಕಿದ್ದಾರೆ.
ಘಟನೆ ಸಂಬಂಧ ಶಾಲೆಯ ಮ್ಯಾನೇಜರ್, ವಾರ್ಡನ್, ದೈಹಿಕ ತರಬೇತಿ ಶಿಕ್ಷಕ ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಕೊಲೆ ಆರೋಪದಡಿ ಬಂಧಿಸಲಾಗಿದೆ.