ಹೊಸದೆಹಲಿ,ಮಾ28(AZM):ವಾರಾಣಸಿಯಲ್ಲಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿಯವರು ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ.
ಮೋದಿಯವರ ವಿರುದ್ಧವೇ ವಾರಣಾಸಿಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆಗಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದ ಮತದಾರರು ಇದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪ್ರಿಯಾಂಕಾ ಗಾಂಧಿ ಅವರನ್ನು ಒತ್ತಾಯಿಸಿದಾಗ ಅವರ ಬಾಯಿಂದ ವಾರಾಣಸಿಯಲ್ಲಿ ನಿಲ್ಲುವ ಬಯಕೆ ವ್ಯಕ್ತವಾಯಿತು. “ವಾರಾಣಸಿಯಲ್ಲಿ ಯಾಕಾಗಬಾರದು?” ಎಂದು ರಾಯ್ ಬರೇಲಿಯ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಿಯಾಂಕಾ ಗಾಂಧಿಯವರು ಪ್ರಶ್ನಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಈ ವರ್ಷವಷ್ಟೇ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಅವರೇ ಸ್ಟಾರ್ ಕೆಂಪೇನರ್ ಆಗಿದ್ದಾರೆ. ತಾಯಿ ಸೋನಿಯಾ ಗಾಂಧಿಯವರ ಕ್ಷೇತ್ರ ರಾಯ್ ಬರೇಲಿ ಕ್ಷೇತ್ರವನ್ನು ಸುತ್ತಿ ಕಾರ್ಯಕರ್ತರಿಗೆ ಪುಷ್ಟಿ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲ. ಬುಧವಾರದಂದು ಪ್ರಿಯಾಂಕಾ ಅವರು ಪಕ್ಷ ಬಯಸಿದರೆ ಚುನಾವಣೆಯ ಅಖಾಡಕ್ಕೆ ಇಳಿಯುವುದಾಗಿ ತಿಳಿಸಿದ್ದರು. ರಾಯ್ ಬರೇಲಿಯಲ್ಲೇ ಅವರು ಚುನಾವಣೆಗೆ ನಿಲ್ಲಬಹುದೆಂಬ ವದಂತಿಗಳಿದ್ದವು. ಈಗ ಅವರು ವಾರಾಣಸಿಯಲ್ಲಿ ಸ್ಪರ್ಧಿಸುವ ಇಚ್ಛೆ ತೋರ್ಪಡಿಸಿದ್ದಾರೆ.