ಹಾಸನ,ಮಾ 29 (MSP): ನನ್ನದು ಸ್ವಾತಿ ನಕ್ಷತ್ರ, ನನಗೆ ಐಟಿ ಶಾಕ್ ನೀಡಲು ಹೋದ್ರೆ, ಮಾಡಿಸಿದವರಿಗೆ ಶಾಕ್ ತಟ್ಟುತ್ತದೆ ಎಂದು ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಐಟಿ ದಾಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ರೇವಣ್ಣ, ನಮ್ಮ ಮೇಲೆ ದಾಳಿ ನಡೆಸಲಾಗಿದೆ ಇದು ರಾಷ್ಟ್ರ ರಾಜಕಾರಣದ ತಿರುವಿಗೆ ದಿಕ್ಸೂಚಿಯಾಗಿದೆ. 60 ವರ್ಷದ ರಾಜಕೀಯ ಜೀವನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಬಹಳಷ್ಟು ನೋವು ಅನುಭವಿಸಿದೆ. ಲೋಕಾಯುಕ್ತ ತನಿಖೆ , ಸಿಒಡಿ, ಸಿಬಿಐ ಹೀಗೆ ಎಲ್ಲ ತನಿಖೆ ನೋಡಿದೆ. ಯಾವುದಕ್ಕೂ ಹೆದರಿ ಓಡುವುದಿಲ್ಲ. ನಮ್ಮ ಮನೆದೇವರು ಈಶ್ವರ, ಆರಾಧ್ಯ ದೇವಿ ಶೃಂಗೇರಿ ಶಾರದೆ. ನನ್ನದು ಸ್ವಾತಿ ನಕ್ಷತ್ರ, ನಮ್ಮ ಕುಟುಂಬಕ್ಕೆ ದಾಳಿ, ಮಾಟ, ಮಂತ್ರ ಯಾವುದೂ ತಟ್ಟಲ್ಲ. ಯಾಕೆಂದರೆ ನಮಗೆ ದೈವಾನುಗ್ರಹವಿದೆ. ಐಟಿ ಶಾಕ್ ನೀದಿದ್ರೆ , ಮಾಡಿಸಿದವ್ರಿಗೆ ಶಾಕ್ ತಿರುಗಿ ತಟ್ಟುತ್ತದೆ ನೋಡುತ್ತಿರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಸನ ಹಾಗೂ ರಾಮನಗರದಲ್ಲಿ ಮಾತ್ರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೆಲ್ಲ ದೇವೇಗೌಡರು ಹೆದರುವುದಿಲ್ಲ. ದೇಶದಲ್ಲಿ ಏನೇನೆಲ್ಲ ನಡಿತಿದೆ ಎಂದು ಜನ ನೋಡುತ್ತಿದ್ದಾರೆ. ಬಿಜೆಪಿಯವರು ಚುನಾವಣೆ ಹತ್ತಿರ ಬಂದಾಗ ದುರುದ್ದೇಶದಿಂದ ಹೀಗೆಲ್ಲ ಮಾಡುತ್ತಿದ್ದಾರೆ. ನಮ್ಮಲ್ಲಿ ಅಕ್ರಮ ಹಣ ಇದ್ದರೆ ಹೊತ್ತುಕೊಂಡು ಹೋಗಲಿ. ನಮಗೆ ಅದು ಬೆಡ. ಅದನ್ನು ಬಿಟ್ಟು ದೇವೇಗೌಡರು ಹಾಗೂ ಮುಖ್ಯಮಂತ್ರಿ ಹಾಗೂ ನನ್ನನ್ನು ಐಟಿ ದಾಳಿ ನಡೆಸುತ್ತೇವೆ ಅಂದರೆ ಅದು ಸಾಧ್ಯವಿಲ್ಲ. ಇದಕ್ಕೆಲ್ಲ ಚುನಾವಣೆ ಫಲಿತಾಂಶ ಉತ್ತರವಾಗುತ್ತದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.