ಹೊಸದಿಲ್ಲಿ, ಮಾ29(SS): ಪ್ರಧಾನಿ ಮೋದಿ ಮಿಷನ್ ಶಕ್ತಿ ಯಶಸ್ಸಿನ ಬಗ್ಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದು, ಈ ಭಾಷಣದಿಂದ ನೀತಿ ಸಂಹಿತೆಯ ಉಲ್ಲಂಘನೆಯಗಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಮೋದಿಗೆ ಕ್ಲೀನ್ ಚಿಟ್ ನೀಡಿದೆ.
ಎ - ಸ್ಯಾಟ್ ಯಶಸ್ಸಿನ ಬಗ್ಗೆ ದೇಶಕ್ಕೆ ಮಾಹಿತಿ ನೀಡಲು ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದರು. ಈ ವೇಳೆ, ಉಪಗ್ರಹವೊಂದನ್ನು ಹೊಡೆದುಹಾಕಲಾಗಿದ್ದು, ಈ ಮೂಲಕ ಭಾರತ ಬಾಹ್ಯಾಕಾಶದ ಸೂಪರ್ಪವರ್ಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ಘೋಷಿಸಿದ್ದರು. ಇದು ಅಪರೂಪದ ಸಾಧನೆ ಎಂದು ಸಹ ವಿಜ್ಞಾನಿಗಳನ್ನು ಹೊಗಳಿದ್ದರು. ಶತ್ರುರಾಷ್ಟ್ರದ ಕಣ್ಗಾವಲು ಸ್ಯಾಟೆಲೈಟ್ ಗಳನ್ನು ಹೊಡೆದುರುಳಿಸುವ ಶಕ್ತಿ ಭಾರತಕ್ಕೂ ಪ್ರಾಪ್ತವಾಗಿದ್ದು, ಭಾರತದ ರಕ್ಷಣೆಯಲ್ಲಿ 'ಮಿಷನ್ ಶಕ್ತಿ' ಅತ್ಯಂತ ಮಹತ್ವದ ಹಜ್ಜೆಯಾಗಿದೆ ಎಂದು ತಿಳಿಸಿದ್ದರು.
ಆದರೆ ವಿಪಕ್ಷಗಳು ಮಾತ್ರ ಪ್ರಧಾನಿ ಮೋದಿಯ ಭಾಷಣ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಈ ಸಂಬಂಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಲೋಕಸಭೆ ಚುನಾವಣೆಯ ಹಿನ್ನೆಲೆ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆ, ಪ್ರಧಾನಿ ಮೋದಿ ಮಾಡಿದ ಭಾಷಣ ನೀತಿ ಸಂಹಿತೆ ಉಲ್ಲಂಘನೆಯಾಗಿದ್ಯಾ ಎಂಬ ಬಗ್ಗೆ ಚುನಾವಣಾ ಆಯೋಗ ತೀರ್ಮಾನ ಕೈಗೊಂಡಿದ್ದು, ಮೋದಿ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಅಂಶಗಳಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದೀಗ ಮೋದಿ ಮಿಷನ್ ಶಕ್ತಿ ಯಶಸ್ಸಿನ ಬಗ್ಗೆ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಿಂದ ನೀತಿ ಸಂಹಿತೆಯ ಉಲ್ಲಂಘನೆಯಗಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.