ಬೆಂಗಳೂರು, ಮೇ 14 (DaijiworldNews/SM): ರಾಜ್ಯದಲ್ಲಿ ಸಿಎಂ ಆಯ್ಕೆ ವಿಚಾರ ಕೈ ಹೈಕಮಾಂಡ್ ಗೆ ತಲೆ ನೋವಾಗಿರುವ ವಿಚಾರ. ಈ ಹಿನ್ನೆಲೆಯಲ್ಲಿ ಇಂದು ಮಹತ್ವದ ಶಾಸಕಾಂಗ ಸಭೆಯನ್ನು ನಡೆಸಲಾಗಿದೆ. ಆದರೆ, ಯಾರು ಸಿಎಂ ಆಗಬೇಕು ಎನ್ನುವ ವಿಚಾರಕ್ಕೆ ಫೈನಲ್ ಟಚ್ ನೀಡೋದಕ್ಕೆ ಸಿಎಂ ಆಯ್ಕೆ ವಿಚಾರವನ್ನು ಎ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ ನೀಡಲಾಗಿದೆ.
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಮಹತ್ವದ ಸಭೆ ನಡೆದಿದೆ. ಇಬ್ಬರು ನಾಯಕರ ಪರವಾಗಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳುತಮ್ಮ ತಮ್ಮ ನಾಯಕರ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ತಮ್ಮ ನಾಯಕರನ್ನು ಸಿಎಂ ಮಾಡಿ ಎಂದು ಒತ್ತಯಿಸುತ್ತಿದ್ದಾರೆ. ಈ ನಡುವೆ ಸಭೆಯಲ್ಲಿ ನಡೆದ ಚರ್ಚೆಯ ಪ್ರಕಾರ ನಾಯಕರ ಮೇಲೆ ಪ್ರೀತಿ ಇದ್ದೇ ಇರುತ್ತೆ. ಆದರೆ, ಅಂತಿಮವಾಗಿರೋದು ಪಕ್ಷಮಾತ್ರ ಎನ್ನುವುದು ಸಭೆಯಲ್ಲಿ ಶಾಸಕರು ಒಪ್ಪಿಕೊಂಡಿದ್ದಾರೆ. ಆದರೆ, ಯಾರು ಸಿಎಂ ಆಗಬೇಕು ಎನ್ನುವುದಕ್ಕೆ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಬೇಕು ಎನ್ನುವುದು ಸಭೆಯಲ್ಲಿ ಕೇಳಿಬಂದ ಒಮ್ಮತದ ಅಭಿಪ್ರಾಯ.
ಹೈಕಮಾಂಡ್ ಗೆ ವೀಕ್ಷಕರು ಇಂದಿನ ಶಾಸಕಾಂಗ ಸಭೆಯ ವರದಿ ನೀಡಲಿದ್ದು, ಈ ವರದಿ ಆಧರಿಸಿ ಕಾಂಗ್ರೆಸ್ ಹೈ ಕಮಾಂಡ್ ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಕರ್ನಾಟಕಕ್ಕೆ ನೂತನ ಸಿಎಂ ಆಯ್ಕೆ ಮಾಡಲಿದೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿ ತಲುಪಿದ್ದು, ನಾಳೆ ಸೋನಿಯಾ ಗಾಂಧಿ ಅವರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಶಾಸಕಾಂಗ ಸಭೆ ಬಳಿಕ, ಸಿಎಂ ಆಯ್ಕೆ ಸಂಬಂಧ ಪ್ರತಿಯೊಬ್ಬ ಶಾಸಕರ ಅಭಿಪ್ರಾಯವನ್ನೂ ಸಂಗ್ರಹಿಸಲು ವೀಕ್ಷಕರು ಮುಂದಾಗಿದ್ದಾರೆ.