ಭೋಪಾಲ್ ಮಾ 29 (MSP): ಲೋಕ ಸಮರದ ಅತ್ಯಂತ ಪೈಪೋಟಿಯ ಕ್ಷೇತ್ರ ಎಂದು ಪರಿಗಣಿತವಾಗಿರುವ ಮಧ್ಯಪ್ರದೇಶದ ಭೋಪಾಲ್ ನ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಆರ್ಎಸ್ಎಸ್ ವಿರುದ್ದ ಕಿಡಿಕಾರಿದ್ದಾರೆ.
ನಾನೊಬ್ಬ ಹಿಂದೂ ಆಗಿದ್ದರೂ ನನ್ನ ಮೇಲೆ ಆರ್ಎಸ್ಎಸ್ ಯಾಕೆ ಹಗೆ ಸಾಧಿಸುತ್ತಿದೆ ಎಂದು ತಿಳಿಯುತ್ತಿಲ್ಲ. ಯಾವುದೇ ಧರ್ಮಕ್ಕೆ ರಾಜಕೀಯದ ಲೇಬಲ್ ಹಚ್ಚಬಾರದು. ನಾನು ಶಂಕರಾಚಾರ್ಯರ ಅನುಯಾಯಿ ಅವರ ಆದರ್ಶಗಳ ಮೇಲೆ ನಂಬಿಕೆಯಿಟ್ಟು ಅದೇ ದಾರಿಯಲ್ಲಿ ನಡೆಯುತ್ತಿರುವವನು. ಹಾಗೆಂದು ಈ ವಿಚಾರಗಳನ್ನು ನಾನು ಎಂದೂ ಚುನಾವಣೆ ಸಂದರ್ಭದಲ್ಲಿ ಬಳಸಿಲ್ಲ, ಅದನ್ನು ಎಲ್ಲೂ ತೋರ್ಪಡಿಸಿಲ್ಲ ಎಂದಿದ್ದಾರೆ.
ಆರ್ಎಸ್ಎಸ್ ಸಂಘಟನೆಯೂ ಹಿಂದೂ ಧರ್ಮದ ಸಂಸ್ಥೆಯಾಗಿದ್ದರೆ ನನಗೇನು ತಕರಾರಿಲ್ಲ, ಆದರೆ ನಾನು ಕೂಡ ಹಿಂದೂ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದು ದಿಗ್ವಿಜಯ್ ತಿಳಿಸಿದ್ದಾರೆ.
ನಾನೊಬ್ಬ ಹಿಂದೂ ಎನ್ನುವುದು ಆರ್ಎಸ್ಎಸ್ ಸಂಘಟನೆಗೆ ಅರಿವಿದ್ದರೂ ನನ್ನ ಮೇಲೆ ಯಾಕೆ ದ್ವೇಷ ಎಂದು ಪ್ರಶ್ನಿಸಿರುವ ಅವರು, ನಾನು ಆರ್ಎಸ್ಎಸ್ನ ಹಾಗೂ ಹಿಂದೂ ವಿರೋಧಿಯಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ರಾಜಕೀಯಕ್ಕೆ ಒಂದು ಕುಟುಂಬವನ್ನೂ ಎರಡು ಭಾಗ ಮಾಡುವ ಶಕ್ತಿ ಇದೆ. ಅದ್ದರಿಂದ ರಾಜಕೀಯವನ್ನು ಧರ್ಮದ ಜೊತೆಗೆ ಸಮೀಕರಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.