ನವದೆಹಲಿ, ಮೇ 16 (DaijiworldNews/SM): ರಾಜ್ಯದಲ್ಲಿ ವಿಧಾನಸಭೆಯಲ್ಲಿ ಬಹುಮತದ ಗೆಲುವು ದಾಖಲಿಸಿದ ಬಳಿಕ ಇದೀಗ ಮುಖ್ಯಮಂತ್ರಿ ಯಾರಾಗೋದು ಅನ್ನೋದೇ ದೊಡ್ಡ ಪ್ರಶ್ನೆ. ಸಿಎಂ ಆಯ್ಕೆಯೇ ಹೈಕಮಾಂಡ್ ಗೆ ತಲೆನೋವು. ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ನಿರಂತರ ಚರ್ಚೆ ನಡೆಸಿದ್ದಾರೆ. ಒಬ್ಬರಾದ ನಂತರ ಒಬ್ಬರಂತೆ ಚರ್ಚಿಸಿದ್ದಾರೆ.
ಡಿಕೆ ಶಿವಕುಮಾರ್ ಅವರೊಂದಿಗಿನ ಸಭೆ ಮುಗಿದಿದ್ದು, ಇದೀಗ ಖರ್ಗೆ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ. ಖರ್ಗೆ ಭೇಟಿ ವೇಳೆ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಕೊಟ್ಟರೆ ಸಿಎಂ ಹುದ್ದೆ ಕೊಡಿ. ಇಲ್ಲದಿದ್ದರೆ ನನಗೆ ಯಾವುದೇ ಹುದ್ದೆ ಬೇಡ ಒಬ್ಬ ಶಾಸಕನಾಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ. ಖರ್ಗೆ ಅವರೊಂದಿಗೆ ಸಭೆ ಮುಗಿಸಿ ಹೊರಬಂದ ಡಿಕೆ ಶಿವಕುಮಾರ್ ಅವರು ಮಾಧ್ಯಮಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿದೆ ತೆರಳಿದ್ದಾರೆ.
ನಾನು ಮೂಲ ಕಾಂಗ್ರೆಸ್ಸಿಗ. ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೇನೆ. ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಮಾತು ಕೊಟ್ಟಂತೆ ನಡೆದಿದ್ದೇನೆ. ಹೊರಗಿನಿಂದ ಬಂದವರು ಅಧಿಕಾರ ಅನುಭವಿಸಿದ್ದಾರೆ. ಮೂಲ ಕಾಂಗ್ರೆಸ್ಸಿಗನಾಗಿರುವ ನನಗೆ ಸಿಎಂ ಸ್ಥಾನ ನೀಡಲೇಬೇಕು ಎಂದು ಡಿಕೆ ಶಿವಕುಮಾರ್ ಹೈಕಮಾಂಡ್ ಮುಂದೆ ಪಟ್ಟು ಹಿಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಇನ್ನು ಡಿಕೆ ಶಿವಕುಮಾರ್ ಜೊತೆ ಚರ್ಚೆ ನಡೆಸಿದ ಬಳಿಕ ಖರ್ಗೆ ಅವರು ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಚರ್ಚೆ ನಡೆಸುತ್ತಿದ್ದು, ಇಬ್ಬರು ನಾಯಕರ ವಾದವನ್ನು ಆಲಿಸಿದ ನಂತರ ಖರ್ಗೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.