ತುಮಕೂರು,ಮಾ 29 (MSP): ಡಿಸಿಎಂ ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ನಾಮಪತ್ರ ವಾಪಸ್ ಪಡೆದಿದ್ದಾರೆ. ಇದಲ್ಲದೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಕೂಡಾ ನಾಮಪತ್ರ ಹಿಂತೆಗೆತಕ್ಕೆ ಅಂತಿಮ ದಿನವಾದ ಶುಕ್ರವಾರ ನಾಮಪತ್ರ ವಾಪಾಸ್ ಪಡೆದರು.
ಮುದ್ದಹನುಮೇಗೌಡರ ನಾಮಪತ್ರ ಹಿಮ್ಪಡೆಯಲು ಅವರ ಪರವಾಗಿ ಅವರ ಬೆಂಬಲಿಗ ರಾಯಸಂದ್ರ ರವಿಕುಮಾರ್ ಅವರು ಮುದ್ದಹನುಮೇಗೌಡರ ನಾಮಪತ್ರ ಹಿಂದಕ್ಕೆ ಪಡೆಯುವ ಹಕ್ಕು ಪತ್ರ ಸಲ್ಲಿಸಿ ನಾಮಪತ್ರ ಹಿಂದಕ್ಕೆ ಪಡೆದರು.
ಆ ಬಳಿಕ ಮಾತನಾಡಿದ ಬೆಂಬಲಿಗ ರಾಯಸಂದ್ರ ರವಿಕುಮಾರ್, ನಮ್ಮ ಮುಖಂಡರಾದ ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗದಿರುವುದಕ್ಕೆ ಅಸಹನೆ ಇನ್ನೂ ಇದೆ. ಆದರೆ, ಹೈಕಮಾಂಡ್ ಸೂಚನೆ ಪ್ರಕಾರ ಮುದ್ದಹನುಮೇಗೌಡರು ನಾಮಪತ್ರವನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ನಾನು ಅವರ ಬೆಂಬಲಿಗರರಾದ ಕಾರಣ ಅವರ ನಿರ್ಧಾರದಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದರು.
ಆ ಬಳಿಕ ಮಾತನಾಡಿದ ಕೆ.ಎನ್. ರಾಜಣ್ಣ ನಾನು ಮುದ್ದಹುನುಮೇಗೌಡರ ಪರವಾಗಿದ್ದವನು. ಅವರು ನಾಮಪತ್ರ ಹಿಂದಕ್ಕೆ ಪಡೆದಿರುವುದರಿಂದ ನಾನೂ ಹಿಂದಕ್ಕೆ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದರು.