ಭೋಪಾಲ್,ಮೇ17(DaijiworldNews/KH):ಆಸ್ಪತ್ರೆಯೂ ಆಂಬ್ಯುಲೆನ್ಸ್ ನಿರಾಕರಿಸಿದ ನಂತರ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ತಮ್ಮ ಮಗಳ ಮೃತದೇಹವನ್ನು ಬೈಕ್ನಲ್ಲಿ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಧ್ಯ ಪ್ರದೇಶ ಶಹದೋಲ್ ನಲ್ಲಿ ನಡೆದಿದೆ.
ಲಕ್ಷ್ಮಣ್ ಸಿಂಗ್ ಮಧ್ಯ ಪ್ರದೇಶದ ಕೋಟಾ ಗ್ರಾಮದ ನಿವಾಸಿಯಾಗಿದ್ದು , ಅವರ ಮಗಳು ಮಾಧುರಿ (13) ಯನ್ನು ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಕೆ ಸಿಕಲ್ ಸೆಲ್ ಕಾಯಿಲೆ ಮೃತಪಟ್ಟಿದ್ದು, ಗ್ರಾಮದಿಂದ 70 ಕಿ.ಮೀ ದೂರದಲ್ಲಿರುವ ಶಹದೋಲ್ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ. ಮಗಳ ಮೃತದೇಹವನ್ನು ಊರಿಗೆ ಕರೆತರಲು ಲಕ್ಷ್ಮಣ್ ಸಿಂಗ್ ಆ್ಯಂಬ್ಯುಲೆನ್ಸ್ ವ್ಯವಸ್ಥೆಯನ್ನು ಕೇಳಿದ್ದಾರೆ. ಆದರೆ ಆಸ್ಪತ್ರೆಯವರು 15 ಕಿ.ಮೀಕ್ಕಿಂತ ದೂರದ ಪ್ರದೇಶಕ್ಕೆ ಆ್ಯಂಬ್ಯುಲೆನ್ಸ್ ಇಲ್ಲ ಎಂದು ಹೇಳಿದ್ದಾರೆ.
ಖಾಸಗಿ ಆ್ಯಂಬ್ಯುಲೆನ್ಸ್ ಮಾಡಲು ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಮಗಳ ಮೃತದೇಹವನ್ನು ಬೈಕ್ ನಲ್ಲಿ ಹಿಡಿದುಕೊಂಡು ಬಂದಿದ್ದೇವೆ ಎಂದು ತಂದೆ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಹದೋಲ್ ನ ಜಿಲ್ಲಾಧಿಕಾರಿ ವಂದನಾ ವೈದ್ಯ ಅವರು ಬೈಕ್ ನಲ್ಲಿ ಹೋಗುತ್ತಿದ್ದವರನ್ನು ತಡೆದು ಕೂಡಲೇ ವಾಹನದ ವ್ಯವಸ್ಥೆ ಮಾಡಿಸಿ, ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿ ತಿಳಿಸಿದೆ.