ಲಕ್ನೋ, ಮಾ 29(SM): ಉತ್ತರಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಹಾಲಿ ಸಂಸದ ಅಶೋಕ್ ಕುಮಾರ್ ದೊಹ್ರೆ ಅವರು ಬಿಜೆಪಿ ಪಕ್ಷ ತೊರೆದು ಶುಕ್ರವಾರದಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಎತಾವಾ ಕ್ಷೇತ್ರದ ಸಂಸದ ಅಶೋಕ್ ಅವರು ಶುಕ್ರವಾರದಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು. ಅವರು ಅದೇ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ 2014ರಲ್ಲಿ ನಡೆದಿದ್ದ ಲೋಕಸಮರದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಬಿಜೆಪಿ ಸಂಸದರಾಗಿ ಆಯ್ಕೆಗೊಂಡಿದ್ದರು.
ಇನ್ನು ಉತ್ತರ ಪ್ರದೇಶದಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನವನ್ನು ಗೆದ್ದುಕೊಂಡು ಸರಕಾರ ರಚನೆ ಮಾಡಿತ್ತು. ಅಲ್ಲದೆ ಲೋಕಸಭೆಯ ಸ್ಥಾನಗಳ ಮೇಲೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಡಿತಹೊಂದಿತ್ತು. ಈ ಬಾರಿ ಯಾವ ಫಲಿತಾಂಶವನ್ನು ಮತದಾರ ನೀಡಲಿದ್ದಾನೆ ಎನ್ನುವುದು ಸದ್ಯದ ಕುತೂಹಲವಾಗಿದೆ.
ಇನ್ನು ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬೀಳಲಿದೆ.