ನವದೆಹಲಿ, ಮೇ 19 (DaijiworldNews/MS): ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರೆತಿರುವ 'ಶಿವಲಿಂಗ' ಎಷ್ಟು ವರ್ಷ ಹಳೆಯದು ಎಂದು ತಿಳಿಯಲು ಕಾರ್ಬನ್ ಡೇಟಿಂಗ್ ಪರೀಕ್ಷೆ ಹಾಗೂ ವೈಜ್ಞಾನಿಕ ಸರ್ವೇ ತಡೆಹಿಡಿಯುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠವು ಸದ್ಯಕ್ಕೆ ಹೈಕೋರ್ಟ್ ನಿರ್ದೇಶನಗಳನ್ನು ಮುಂದೂಡುವ ಆದೇಶವನ್ನು ನೀಡಿದೆ
ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆ ವೇಳೆ ಪತ್ತೆಯಾದ ವಸ್ತುವು ಶಿವಲಿಂಗವೇ ಅಥವಾ ಕಾರಂಜಿಯೇ ಎಂಬುದನ್ನು ಪತ್ತೆ ಹಚ್ಚಲು ವೈಜ್ಞಾನಿಕ ತನಿಖೆಗೆಹೈಕೋರ್ಟ್ ಆದೇಶದಲ್ಲಿ ಇರುವ ನಿರ್ದೇಶನಗಳ ಅನುಷ್ಠಾನವನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ಮುಂದೂಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು.
ಮಸೀದಿ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಹುಜೇಫಾ ಅಹ್ಮದಿ, ಮುಂದಿನ ಸೋಮವಾರದಿಂದ ಸಮೀಕ್ಷೆ ಪ್ರಾರಂಭವಾಗಲಿದೆ ಎಂದು ಹೇಳಿದರು. ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಮೀಕ್ಷೆ ನಡೆಸುವುದರಿಂದ ಕಟ್ಟಡಕ್ಕೆ ಸ್ವಲ್ಪ ಹಾನಿಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.