ಬೆಂಗಳೂರು, ಮೇ 19 (DaijiworldNews/HR): 2000 ರೂಪಾಯಿ ಮುಖಬೆಲೆ ನೋಟನ್ನು ಹಿಂಪಡೆಯುವುದರ ಬಗ್ಗೆ ಕರ್ನಾಟಕದ ನಿಯೋಜಿತ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈಗ ರೂ.2000 ಮೌಲ್ಯದ ನೋಟು ನಿಷೇಧಿಸುವುದಿದ್ದರೆ 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಪ್ರಧಾನಿ ಮೋದಿ ಅವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಇನ್ನು ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ ಮೋದಿಯವರು, 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು ಎಂದಿದ್ದಾರೆ.
ತಮ್ಮ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶ ಪ್ರಯತ್ನ ಇದಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.