ಮೈಸೂರು, ಮಾ30(SS): ಪ್ರಧಾನಿ ನರೇಂದ್ರ ಮೋದಿ ಮಹಾ ನಾಟಕಕಾರ ಹಾಗೂ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸುಳ್ಳುಗಾರನನ್ನು ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೌಕಿದಾರ್ ಎಂದು ಹೇಳುತ್ತಿದ್ದಾರೆ. ದೇಶದ ಜನರ ರಕ್ಷಣೆ ಮಾಡುವುದು ಅಧಿಕಾರಕ್ಕೆ ಬಂದ ಯಾವುದೇ ಪಕ್ಷದ ಕರ್ತವ್ಯ. ಆದರೆ ನರೇಂದ್ರ ಮೋದಿ ಅವರು ನೀರವ್ ಮೋದಿ, ಅಂಬಾನಿ ಅವರ ಚೌಕಿದಾರ್ ಆಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಅಭಿವೃದ್ಧಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಪ್ರಚಾರಕ್ಕೆ ಸಿದ್ಧನಿದ್ದೇನೆ. ಅಧಿಕಾರಕ್ಕೆ ಬರುವ ಮುನ್ನ ಘೋಷಣೆ ಮಾಡಿದ ಆಕರ್ಷಕ ಯೋಜನೆಗಳು ಇಂದಿಗೂ ಅನುಷ್ಠಾನಕ್ಕೆ ಬಂದಿಲ್ಲ. ನೋಟು ಅಮಾನ್ಯೀಕರಣದಿಂದಾಗಿ ಉದ್ಯೋಗ ಸೃಷ್ಟಿಸುವುದಿರಲಿ 1.80 ಲಕ್ಷ ಜನರು ಉದ್ಯೋಗ ಕಳೆದುಕೊಂಡರು. ಸಣ್ಣ ವ್ಯಾಪಾರಸ್ಥರು, ಗುಡಿ ಕೈಗಾರಿಕೆಗಳು ಮುಚ್ಚಿಹೋಗಿವೆ. ಅಭಿವೃದ್ಧಿ ಮಾಡಿರುವುದಾಗಿ ಹೇಳುವ ಬಿಜೆಪಿ ಸರಕಾರದ ಅವಧಿಯಲ್ಲಿ ದೇಶದ ಆದಾಯವೂ ಹೆಚ್ಚಾಗಿಲ್ಲ. ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ಬೆಲೆ ಕಡಿಮೆಯಾದರೂ, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಇಂಧನ ದೊರೆಯುತ್ತಿಲ್ಲ ಎಂದು ಟೀಕಿಸಿದರು.
ಮೋದಿ ಮಹಾ ನಾಟಕಕಾರ. ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸುಳ್ಳುಗಾರನನ್ನು ನೋಡಿಲ್ಲ. ಅದೇ ದಾರಿಯಲ್ಲಿ ಸಂಸದ ಪ್ರತಾಪ್ ಸಿಂಹ ನಡೆಯುತ್ತಿದ್ದಾರೆ. ತಮ್ಮ 5 ವರ್ಷದ ಆಡಳಿತಾವಧಿಯಲ್ಲಿ ಏನೂ ಕೆಲಸ ಮಾಡಿಲ್ಲ. ಜೋಡಿ ಹಳಿ ನಿರ್ಮಾಣ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು ಕಾಂಗ್ರೆಸ್ ಸರಕಾರ. ರಿಂಗ್ ರಸ್ತೆಯನ್ನು ಪ್ರತಾಪ್ ಸಿಂಹ ಅವಧಿಯಲ್ಲಿ ನಿರ್ಮಿಸಲಾಗಿದೆಯೇ..? ಎಂದು ಪ್ರಶ್ನಿಸಿದರು.
ಬೆಂಗಳೂರು - ಮೈಸೂರು ನಡುವಿನ ರಸ್ತೆ ಕಾಮಗಾರಿಯನ್ನು ನಾನು ಮತ್ತು ಮಹದೇವಪ್ಪ ಅಧಿಕಾರದಲ್ಲಿ ಕೇಂದ್ರ ಸರಕಾರಕ್ಕೆ ಒತ್ತಡ ತಂದು ಅದರ ಅನುಷ್ಠಾನಕ್ಕೆ ಶ್ರಮಿಸಿದ್ದೇವೆ. ಏನೂ ಮಾಡದ ಪ್ರತಾಪ್ ಸಿಂಹ ಪುಸ್ತಕವೊಂದನ್ನು ಮಾಡಿಸಿಕೊಂಡು ನಾವು ಮಾಡಿದ ಕೆಲಸಗಳನ್ನು ತಾನು ಮಾಡಿರುವುದಾಗಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸೋಲುವುದೇ ನಮ್ಮ ಗುರಿಯಾಗಬೇಕು.ನಾನು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ಮಾಡುವ ಬಗ್ಗೆ ಅನುಮಾನ ಬೇಡ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ನಾನು ರಾಜ್ಯಾದ್ಯಂತ ಒಟ್ಟಾಗಿ ಎಲ್ಲಾ ಕ್ಷೇತ್ರದಲ್ಲೂ ಪ್ರಚಾರ ಮಾಡುತ್ತೇವೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್-ಜೆಡಿಎಸ್ ನಡುವೆ ನೇರಾ ಹಣಾಹಣಿ ನಡೆದಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿ ಆಡಳಿತದಿಂದಾಗಿ ಸಂವಿಧಾನವನ್ನು ಉಳಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ ಎಂದು ತಿಳಿಸಿದರು.