ಅಯೋಧ್ಯೆ, ಮಾ30(SS): ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಿದ್ದು ಮೋದಿ ಅವರೇ ಅಲ್ಲವೇ…? ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೇ ಮೋದಿಗೆ ಬಿರಿಯಾನಿ ಬಡಿಸಿದ್ದರು ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.
2015ರಲ್ಲಿ ಮೋದಿ ಕೈಗೊಂಡ ದಿಢೀರ್ ಪಾಕ್ ಭೇಟಿಯ ಬಗ್ಗೆ ಮೋದಿ ಕಾಲೆಳೆದಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೇ ಮೋದಿಗೆ ಬಿರಿಯಾನಿ ಬಡಿಸಿದ್ದರು. ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಿದ್ದು ಮೋದಿ ಅವರೇ ಅಲ್ಲವೇ…? ಜಗತ್ತಿನ ನಾನಾ ದೇಶಗಳನ್ನು ಸುತ್ತುವ ಪ್ರಧಾನಿ ಅವರಿಗೆ ಕಳೆದ 5 ವರ್ಷಗಳಿಂದ ತಮ್ಮ ಕ್ಷೇತ್ರದ ಒಂದೇ ಒಂದು ಗ್ರಾಮಕ್ಕೆ ಭೇಟಿ ನೀಡುವಷ್ಟು ಸಮಯವೂ ಇಲ್ಲ ವ್ಯಂಗ್ಯ ಮಾಡಿದ್ದಾರೆ.
ಸಾಕಷ್ಟು ಬಾರಿ ವಿದೇಶ ಪ್ರವಾಸ ಕೈಗೊಡಿರುವ ಮೋದಿ ಅವರು ತಮ್ಮ ಕ್ಷೇತ್ರ ವಾರಾಣಸಿಯ ಒಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ವಾಸ್ತವ ಸಂಗತಿ ಅರಿಯುವ ಪ್ರಯತ್ನ ಮಾಡಲಿಲ್ಲ. ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಒಂದಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ವಾರಾಣಸಿಯನ್ನು ಅವರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಅವರ ಸರಕಾರ ಜನ ವಿರೋಧಿ ಮತ್ತು ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಬಡವರ ಬ್ಯಾಂಕ್ ಖಾತೆಗೆ ವಾರ್ಷಿಕ 72,000 ರೂ. ಜಮೆ ಮಾಡುವ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಅವರು, ಯುಪಿಎ ಸರಕಾರ ಜಾರಿಗೆ ತಂದ ಯೋಜನೆಗಳನ್ನು ಹಳ್ಳ ಹಿಡಿಯುವಂತೆ ಮೋದಿ ಸರಕಾರ ಮಾಡಿದೆ ಎಂದು ಟೀಕಿಸಿದರು.
ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.