ಬೆಳಗಾವಿ, ಮೇ 23(DaijiworldNews/MS): ಮನೆ ಮುಂದಿನ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶವಾಗಿ 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಮಚ್ಛೆ ಗ್ರಾಮದಲ್ಲಿ ನಡೆದಿದೆ.
ಮಧುರಾ ಮೋರೆ (13) ಮೃತಪಟ್ಟ ಬಾಲಕಿ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಮನೆಯ ಒಂದನೇ ಮಹಡಿ ಮೇಲೆ ಆಟ ಆಡುತ್ತಿದ್ದಾಗ ಮನೆಯ ಮುಂದೆಯೇ ನೇತಾಡುತ್ತಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಾಗಿದೆ.ವಿದ್ಯುತ್ ತಂತಿ ತಾಗಿದ ಕ್ಷಣವೇ ಬಾಲಕಿ ಕರೆಂಟ್ ಶಾಕ್ ಹೊಡೆದು ಮೈಯೆಲ್ಲಾ ಸುಟ್ಟ ಗಾಯಗಳಂತಾಗಿ ಸಾವನ್ನಪ್ಪಿದ್ದಾಳೆ.
ಮನೆಯ ಮುಂದೆ ನೇತಾಡುತ್ತಿದ್ದ ವಿದ್ಯುತ್ ವೈರ್ ಅನ್ನು ತೆರವುಗೊಳಿಸದೇ ಅಥವಾ ಅದರಿಂದ ವಿದ್ಯುತ್ ಶಾಕ್ ಹೊಡೆಯದಂತೆ ಪ್ಲಾಸ್ಟಿಕ್ ಪೈಪ್ ಅಳವಡಿಸದೇ ಮನೆಯ ಮಾಲೀಕರು ನಿರ್ಲಕ್ಷ್ಯ ಮಾಡಿದ್ದರು. ಹೈಟೆನ್ಷನ್ ತಂತಿ ಇದ್ದ ಹಿನ್ನೆಲೆ ಮನೆ ಕಟ್ಟದಂತೆ ಮನೆ ಮಾಲೀಕರಿಗೆ ಹೆಸ್ಕಾಂ ಮೊದಲೇ ನೋಟಿಸ್ ನೀಡಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಿ ಮೋರೆ ಕುಟುಂಬ ಮನೆ ನಿರ್ಮಿಸಿದ್ದರು ಎನ್ನಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.