ಬೆಂಗಳೂರು, ಮೇ 23 (DaijiworldNews/HR): ಮುಂದಿನ 5 ವರ್ಷಗಳವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಮುಂದುವರಿಸಲಿದ್ದಾರೆ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆಗೆ ವಿಚಾರವಾಗಿ ವಾದ-ಪ್ರತಿವಾದಗಳು ಪ್ರಾರಂಭವಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಇದೇ ವಿಚಾರದಕ್ಕು ಗರಂ ಆಗಿದ್ದು, ಇದೀಗ ಮಧ್ಯ ಪ್ರವೇಶ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಯಾರೂ ಕೂಡ ಅನಗತ್ಯ ಹೇಳಿಕೆ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಣದವರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಣದೀಪ್ ಸಿಂಗ್ ಸುರ್ಜೆವಾಲ, ಯಾರೂ ಕೂಡ ಅನಗತ್ಯ ಹೇಳಿಕೆ ನೀಡಬಾರದು. ಸಿಎಂ, ಡಿಸಿಎಂ ನಡುವಿನ ಮಾತುಕತೆಗಳು ನಾಲ್ಕು ಗೋಡೆಯ ಮಧ್ಯೆ ನಡೆದಿರುವುದು. ಯಾರೂ ಕೂಡ ಗೊಂದಲ ಮೂಡಿಸುವ ಹೇಳಿಕೆ ನೀಡಬೇಡಿ. ಎಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಯಾರು ಏನೇ ಹೇಳಿಕೆ ಕೊಡಲಿ. ಎಐಸಿಸಿ ಸಮಿತಿ ಇದೆ, ಎಐಸಿಸಿ ಅಧ್ಯಕ್ಷರಿದ್ದಾರೆ. ಈ ವಿಷಯವನ್ನು ಅವರು ನೋಡಿಕೊಳ್ಳುತ್ತಾರೆ. ನಾನು ಈ ಬಗ್ಗೆ ಯಾವುದೇ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಸುತ್ತೂರು ಮಠಕ್ಕೆ ಸೋಮವಾರ ಭೇಟಿ ನೀಡಿದ್ದ ಎಂ.ಬಿ. ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಲೋಕಸಭಾ ಚುನಾವಣೆ ಬಳಿಕ ಪಕ್ಷದಲ್ಲಿ ಯಾವುದೇ ಬದಲಾವಣೆಯಿಲ್ಲ. ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.