ಬೆಂಗಳೂರು,ಮಾ 30(MSP): ಮಹಿಳಾ ಎಂಪವರ್ಮೆಂಟ್ ಪಕ್ಷದ ಅಧ್ಯಕ್ಷೆ ನೌಹೀರಾ ಶೇಖ್ ಅವರನ್ನು ಭಾರತೀನಗರ ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಅಲ್ಲದೆ 10 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.
೨೦೧೮ರ ಡಿಸೆಂಬರ್ನಲ್ಲಿ ಹೈದರಾಬಾದ್ನಲ್ಲಿ ಬಂಧಿಸಿದ್ದ ನೌಹೀರಾ ಶೇಖ್ ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ಕೋರಿ ಹೈದರಾಬಾದ್ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅವರನ್ನು ತಮ್ಮ ವಶಕ್ಕೆ ಪಡೆದು ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀನಗರ ಠಾಣೆಯಲ್ಲಿ ನೌಹೀರಾ ಶೇಖ್ ವಿರುದ್ದ ಜೀಬಾ ತಬಸ್ಸುಮ್ ಎಂಬುವರು ನವೆಂಬರ್.9ರಂದು ದೂರು ಸಲ್ಲಿಸಿದ್ದರು. ಹೀರಾ ಗ್ರೂಪ್ ಆಫ್ ಕಂಪನೀಸ್ನ ಸಿಇಒ ಆಗಿರುವ ನೌಹೇರಾ ಶೇಖ್ ಹೈದ್ರಾಬಾದ್ನಲ್ಲಿ ಕೇಂದ್ರ ಕಚೇರಿ ಹೊಂದಿದ್ದಾರೆ. ಬೆಂಗಳೂರಿನ ನ್ಯೂ ಬಂಬೂ ಬಜಾರ್ನಲ್ಲಿ ಕೂಡ ತಮ್ಮ ಕಚೇರಿ ಹೊಂದಿದ್ದರು. ಜೇಬಾ ತಬಸ್ಸುಮ್ ಎಂಬುವರನ್ನು ಪರಿಚಯಿಸಿಕೊಂಡಿದ್ದ ನೌಹೇರಾ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಬರಲಿದೆ, ಅಲ್ಲದೆ ಲಾಭಂಶದ ಹೆಚ್ಚು ಹಣ ನೀಡುವುದಾಗಿ ಹೇಳಿ ನಂಬಿಸಿದ್ದರು. ನೌಹೇರಾ ಮಾತು ನಂಬಿದ ತಬಸ್ಸುಮ್ ಹಾಗೂ ಅವರ ಹೆಣ್ಣುಮಕ್ಕಳು ಕಂಪನಿಯಲ್ಲಿ 2015ರಲ್ಲಿ 40 ಲಕ್ಷ ಹೂಡಿಕೆ ಮಾಡಿದ್ದರು.
ಆದರೆ ಹೂಡಿಕೆ ಮಾಡಿದ ಹಣಕ್ಕೆ ಹಲವು ತಿಂಗಳು ಕಳೆದರೂ ಯಾವುದೇ ಲಾಭಾಂಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿದಾಗ ಹೂಡಿಕೆ ಹಣವನ್ನು ತಮ್ಮ ಖಾತೆಗೆ ಜಮೆ ಮಾಡುವುದಾಗಿ ಹೇಳಿ ಕಾಲಕಳೆಯುತ್ತಿದ್ದರು.ಇದೀಗ ಪೊಲೀಸರು ಆರೋಪಿ ನೌಹೇರಾ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.