ಬೆಂಗಳೂರು, ಮೇ 24(DaijiworldNews/MS): ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ದೆಹಲಿಗೆ ತೆರಳಲಿದ್ದಾರೆ.
ಇಂದು ಸಂಜೆ 6 ಗಂಟೆ ಸುಮಾರಿಗೆ ಸಿಎಂ ಹಾಗೂ ಡಿಸಿಎಂ ಒಂದೇ ವಿಮಾನದಲ್ಲಿ ದೆಹಲಿಗೆ ಹಾರಲಿದ್ದು, ವರಿಷ್ಠರ ಜತೆಗೆ ಯಾರನ್ನೆಲ್ಲ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಿದ್ದಾರೆ. ಸಚಿವ ಸ್ಥಾನಕ್ಕೆ ಈಗಾಗಲೇ ಲಾಬಿ ಶುರುವಾಗಿದ್ದು, ಸಿದ್ದರಾಮಯ್ಯ ಹಾಗೂ ಡಿಕೆಶಿ ಆಪ್ತರು ಸಚಿವ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿದ್ದಾರೆ. ಹೀಗಾಗಿ, ಸಚಿವರ ಪಟ್ಟಿ ಸಿದ್ಧಪಡಿಸುವುದು ಹೈಕಮಾಂಡ್ಗೂ ದೊಡ್ಡ ಸವಾಲಾಗಿದೆ.
ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದ ಜತೆಗೆ ಉಭಯ ನಾಯಕರ ಆಪ್ತರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವೂ ಅಡಕವಾಗಿರುವುದರಿಂದ ಆಯ್ಕೆ ಕಗ್ಗಂಟಾಗುತ್ತಿದೆ. ಕಳೆದ ಬಾರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕೆಲ ನಿರ್ದಿಷ್ಟಹೆಸರುಗಳ ಬಗ್ಗೆ ಪಟ್ಟು ಹಿಡಿದಿದ್ದರಿಂದ 28 ಮಂದಿಯ ಬದಲಾಗಿ ಕೇವಲ 8 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ತೀರ್ಮಾನ ಮಾಡಲಾಗಿತ್ತು.