ನವದೆಹಲಿ,ಮಾ 30(MSP): ಮಾರ್ಚ್ 31 ಹಣಕಾಸು ವರ್ಷದ ಕೊನೆ ದಿನ. ಈ ಬಾರಿ ಹಣಕಾಸಿನ ವರ್ಷದ ಕೊನೆ ದಿನ ಭಾನುವಾರ ಬಂದಿರುವುದರಿಂದ ಸರ್ಕಾರಿ ವಹಿವಾಟು ನಡೆಸುವ ದೇಶದ ಎಲ್ಲ ಬ್ಯಾಂಕ್ ಗಳು ಈ ಭಾನುವಾರವೂ ಕಾರ್ಯ ನಿರ್ವಹಿಸಲಿವೆ.
ಈ ಬಗ್ಗೆ ಆರ್. ಬಿ. ಐ ಎಲ್ಲ ಬ್ಯಾಂಕ್ ಗಳಿಗೆ ನೋಟಿಸ್ ನೀಡಿದ್ದು, ಈ ಹಿನ್ನಲೆಯಲ್ಲಿ ಬ್ಯಾಂಕ್ ಗಳು ಭಾನುವಾರವೂ ಕೆಲಸ ನಿರ್ವಹಿಸಲಿದೆ. ಸರ್ಕಾರಿ ಪಾವತಿ ಹಾಗೂ ರಸೀದಿಗಾಗಿ ಭಾನುವಾರ ಮಾರ್ಚ್ 31 ರಂದು ಎಲ್ಲ ಶಾಖೆಗಳು ತೆರೆದಿರಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹಾಗಾಗಿ ಎಲ್ಲ ಬ್ಯಾಂಕ್ ಗಳು ಭಾನುವಾರ ಕೆಲಸ ಮಾಡಬೇಕೆಂದು ಸೂಚನೆ ನೀಡುಲಾಗುತ್ತದೆ ಎಂದು ಆರ್.ಬಿ.ಐ. ಸುತ್ತೋಲೆಯಲ್ಲಿ ಹೇಳಿದೆ.
ಸರ್ಕಾರಿ ವಹಿವಾಟು ನಡೆಸುವ ಎಲ್ಲ ಬ್ಯಾಂಕ್ ಗಳು ಮಾರ್ಚ್ 30 ರ ಶನಿವಾರ ರಾತ್ರಿ 8 ಗಂಟೆಯವರೆಗೆ ಹಾಗೂ ಮಾರ್ಚ್ 31 ರಂದು ಸಂಜೆ 6 ಗಂಟೆಯವರೆಗೆ ತೆರೆದಿರಬೇಕು ಎಂದು ಆರ್.ಬಿ.ಐ. ಸುತ್ತೋಲೆ ತಿಳಿಸಿದೆ. ಏಪ್ರಿಲ್ 1 ರಂದು ಹಣಕಾಸು ವರ್ಷ ಬದಲಾಗಲಿದೆ.