ನವದೆಹಲಿ, ಮೇ 26 (DaijiworldNews/KH): ದೆಹಲಿಯಲ್ಲಿ 30 ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಸೈಕೋಪಾತ್, ಸರಣಿ ಕೊಲೆಗಾರ ರವೀಂದರ್ ಕುಮಾರ್ಗೆ ರಾಷ್ಟ್ರ ರಾಜಧಾನಿಯ ರೋಹಿಣಿ ಕೋರ್ಟ್ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
2015ರಲ್ಲಿ ಮಕ್ಕಳ ಅಪಹರಣ ಮತ್ತು ಅತ್ಯಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಆರೋಪಿ ರವೀಂದರ್ನನ್ನು ಬಂಧಿಸಲಾಗಿತ್ತು. ಆ ಬಳಿಕ ಪೊಲೀಸ್ ವಿಚಾರಣೆಯ ವೇಳೆ ಬೆಚ್ಚಿಬೀಳಿಸುವ ಸಂಗತಿಗಳು ಗೊತ್ತಾಗಿದ್ದವು. ಪೊಲೀಸರ ಪ್ರಕಾರ 2008 ರಿಂದ 2015ರ ವರೆಗೆ ರವೀಂದರ್ 30 ಮಕ್ಕಳನ್ನು ಅತ್ಯಾಚಾರವೆಸಗಿ ಹತ್ಯೆಗೈದಿದ್ದು, ಆ ಪೈಕಿ ಹಿರಿಯ ಮಗುವಿನ ವಯಸ್ಸು 12 ಹಾಗೂ ಕಿರಿಯ ಮಗುವಿನ ವಯಸ್ಸು ಕೇವಲ 2 ವರ್ಷವೆಂದು ಬಹಿರಂಗಪಡಿಸಿದ್ದ.
ಅಲ್ಲದೇ ತನಗೆ 19 ವರ್ಷ ವಯಸ್ಸಿದ್ದಾಗ ಮೊದಲ ಅಪರಾಧ ಎಸಗಿದ್ದಾಗಿಯೂ ತಿಳಿಸಿದ್ದ. ಪ್ರಸ್ತುತ 6 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯಾಗಿದೆ.