ಬೆಂಗಳೂರು, ಮೇ 26(DaijiworldNews/MS): ನೂತನ ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದುಈ ಬಗ್ಗೆ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್'ಡಿ.ಕುಮಾರಸ್ವಾಮಿಯವರು ಶುಕ್ರವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ರಾಷ್ಟ್ರಪತಿಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇದ್ದಕ್ಕಿದ್ದಂತೆ ಪ್ರೀತಿ, ಗೌರವ ಬಂದಿದೆ. ಕಾಂಗ್ರೆಸ್ ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ಮಾನ್ಯ ರಾಷ್ಟ್ರಪತಿಗಳಾದ ಮುರ್ಮು ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಅಷ್ಟೊಂದು ಗೌರವ ಇರುವ ಕಾಂಗ್ರೆಸ್, ಅಂದು ದ್ರೌಪದಿ ಮುರ್ಮು ವಿರುದ್ದವೇಕೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು? ಈಗ ಬಿಜೆಪಿ ಆದಿವಾಸಿಗಳನ್ನು ಅವಮಾನಿಸುತ್ತಿದ್ದಾರೆಂದು ಆರೋಪಿಸುತ್ತಿದೆ. ಇದೆಲ್ಲವೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಗಳಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ಭವನವನ್ನು ಉದ್ಘಾಟನೆ ಮಾಡಬೇಕಾದಾಗ ರಾಷ್ಟ್ರಪತಿ, ರಾಜ್ಯಪಾಲರನ್ನು ಕರೆದ ಉದಾಹರಣೆ ಇಲ್ಲ. ಛತ್ತೀಸ್ಗಢ ವಿಧಾನಸಭೆ ಅಡಿಗಲ್ಲಿಗೆ ಸೋನಿಯಾಗಾಂಧಿ, ರಾಹುಲ್ ಗಾಂಧಿಯನ್ನು ಕರೆದಿದ್ದರು. ರಾಜ್ಯಪಾಲರನ್ನು ಕರೆಸಿ ಅಡಿಗಲ್ಲು ಹಾಕಿಸಿರಲಿಲ್ಲ. ಕರ್ನಾಟಕದ ವಿಕಾಸಸೌಧವನ್ನು ಅಂದಿನ ಮುಖ್ಯಮಂತ್ರಿ ಉದ್ಘಾಟನೆ ಮಾಡಿದ್ದರು. ಕಾಂಗ್ರೆಸ್ ಪಕ್ಷ ಈಗ ರಾಷ್ಟ್ರಪತಿ ಬಗ್ಗೆ ಮಾತನಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಬಿಜೆಪಿ ಬಗ್ಗೆ ಜೆಡಿಎಸ್ ಮೃದುಧೋರಣೆ ಅಂತಾ ತಿಳಿಯುವ ಅಗತ್ಯ ಇಲ್ಲ .ಸಂಸತ್ ಭವನ ಒಂದು ಪಕ್ಷಕ್ಕೆ, ವ್ಯಕ್ತಿಗೆ ಸೀಮಿತವಲ್ಲ. ದೇಶದ ತೆರಿಗೆ ಹಣದಿಂದ ಕಟ್ಟಿರುವ ಭವನ. ನಾವೇನು ಕಾಂಗ್ರೆಸ್ ಪಕ್ಷದ ಗುಲಾಮರಲ್ಲ, ನಮ್ಮದೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವೇಕೆ ಕಾಂಗ್ರೆಸ್ ಅನುಸರಿಸಬೇಕು? ಎಂದು ಪ್ರಶ್ನಿಸಿದ್ದಾರೆ.