ಬೆಂಗಳೂರು,ಮಾ 30(MSP): ರಾಜ್ಯದಲ್ಲಿ ಒಂದೆಡೆ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದ್ರೆ ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಎತ್ತ ಕಡೆಯೂ ಪ್ರಚಾರಕ್ಕೆ ಹೋಗದೆ ಮನೆಯಲ್ಲೇ ಕುಳಿತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ’ಹೈಕಮಾಂಡ್ ಮೇಲೆ ಮುನಿಸು ’ ಎಂಬ ಮಾಹಿತಿ ಹರಿದಾಡಲಾರಂಭಿಸಿದೆ.
ಒಂದೆಡೆ ರಾಜ್ಯದಲ್ಲಿ ಮೈತ್ರಿ ಪಕ್ಷ ಪ್ರಚಾರ ಕಾರ್ಯಕ್ಕೆ ಬಿರುಸು ನೀಡಿದ್ದರೆ, ಬಿಜೆಪಿ ಪಕ್ಷದಲ್ಲಿ ಅಂತರಿಕ ಭಿನ್ನಮತ ಇನ್ನು ಶಮನವಾದಂತೆ ಕಾಣಿಸುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರೇ ಮುನಿಸುಕೊಂಡು ಮನೆಯಲ್ಲಿ ಕೂತರೆ ಕಾರ್ಯಕರ್ತರಿಗೆ ಹುಮ್ಮಸ್ಸ್ತುತುಂಬಲಿರುವವರು ಯಾರು ಎಂಬ ಪ್ರಶ್ನೆ ಪಕ್ಷದ ಬೆಂಬಲಿಗರನ್ನು ಕಾಡತೊಡಗಿದೆ.
ಬಿಎಸ್ವೈ ಅವರ ಮುನಿಸಿಗೆ ಟಿಕೆಟ್ ಹಂಚಿಕೆಯಲ್ಲಿ ಅವರನ್ನು ಕಡೆಗಣನೆ ಮಾಡಿದ್ದೆ ಕಾರಣ ಎನ್ನಲಾಗಿದೆ. ಬೆಂಗಳೂರು ದಕ್ಷಿಣ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ಕೈ ತಪ್ಪಿ ಹೋಗಿರುವುದು ಇವರ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಪ್ರಚಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳದೆ ಬಿಎಸ್ವೈ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ಕಳೆದ ನಾಲ್ಕು ದಿನದಿಂದ ಮನೆಯಲ್ಲಿಯೇ ಉಳಿದುಕೊಂಡಿರುವ, ಬಿಎಸ್ ಯಡಿಯೂರಪ್ಪ ಅವರು ಬಿ.ಎಲ್. ಸಂತೋಷ್ ಮೇಲೆ ಕೋಪಿಸಿಕೊಂಡಿದ್ದಾರಾ ? ಅವರೇ 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿ ಟಿಕೆಟ್ ತಪ್ಪಿಸಲು ಕಾರಣರಾಗಿದ್ದಾರಾ ? ಎನ್ನುವ ಶಂಕೆ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದೆ. ಒಟ್ಟಾರೆ ಭಾನುವಾರವಾದರೂ ಬಿಎಸ್ವೈ ಹುರುಪಿನಿಂದ ಪಕ್ಷದ ಪ್ರಚಾರ ಪಾಲ್ಗೊಳ್ಳುತ್ತಾರೆಯೇ ಎಂದು ಕಾಯುತ್ತಾ ಕುಳಿತಿದ್ದಾರೆ ಪಕ್ಷದ ಕಾರ್ಯಕರ್ತರು.