ಶಿವಮೊಗ್ಗ ಜೂ 02 (DaijiworldNews/MS): ವಿಮಾನ ನಿಲ್ದಾಣ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಆದಿತ್ಯ ರಾವ್ 20 ವರ್ಷಗಳ ಜೈಲು ಶಿಕ್ಷೆಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಅನುಭವಿಸುತ್ತಿದ್ದು ಇದೀಗ ಆತನ ವಿರುದ್ಧ ಜೈಲು ಅಧಿಕಾರಿಗಳೇ ದೂರು ದಾಖಲಿಸಿದ್ದಾರೆ.
ಎರಡು ಟೆಲಿವಿಷನ್ ಸೆಟ್ ಗಳನ್ನು ಒಡೆದು ಹಾಕಿ ಕಾರಾಗೃಹದ ಆಸ್ತಿಯನ್ನು ಹಾನಿ ಮಾಡಿದ ಆರೋಪದ ಹಿನ್ನೆಲೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ಚೀಫ್ ಸೂಪರಿಂಟೆಂಡೆಂಟ್ ಅವರು ದೂರು ನೀಡಿದ್ದಾರೆ.
ಆದಿತ್ಯ ರಾವ್ ಮೇ 31ರಂದು ಮಧ್ಯಾಹ್ನ ಕಾರಾಗೃಹದ ವಿಡಿಯೋ ಕಾನ್ಫರೆನ್ಸ್ ಕೊಠಡಿಗೆ ಬಂದಿದ್ದ. ತನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿಚಾರಣೆ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದ. ಅಲ್ಲಿದ್ದ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿ ಇಲ್ಲ ಎಂದು ತಿಳಿಸಿದ್ದರು. ಸ್ವಲ್ಪ ದೂರ ಹೋಗಿದ್ದ ಆದಿತ್ಯ ಹಿಂತಿರುಗಿ ವಿ.ಸಿ.ಕೊಠಡಿಯಲ್ಲಿದ್ದ ಟಿವಿಯೊಂದಕ್ಕೆ ಕಲ್ಲಿನಿಂದ ಹೊಡೆದು ಹಾನಿ ಮಾಡಿದ್ದಾನೆ. ಅಷ್ಟರಲ್ಲಿ ಕೊಠಡಿಯಲ್ಲಿದ್ದ ಸಿಬ್ಬಂದಿ ಆದಿತ್ಯನನ್ನು ಹಿಡಿದಿದ್ದರು. ಆದರೆ ಅವರಿಂದ ತಪ್ಪಿಸಿಕೊಂಡು ಮತ್ತೊಂದು ಟಿವಿಯನ್ನು ಒಡೆದು ಹಾಕಿದ್ದಾನೆ. ಕೂಡಲೆ ಸಿಬ್ಬಂದಿ ಆದಿತ್ಯನನ್ನು ಹಿಡಿದು ಜೈಲರ್ ವಶಕ್ಕೆ ಒಪ್ಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.