ಬೆಂಗಳೂರು, ಮಾ 30(SM): ರಾಜ್ಯದಲ್ಲಿ ಐಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಲಿದ್ದಾರೆ ಎಂದು ಬುಧವಾರವೇ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಈಗ ಮತ್ತೊಂದು ಐಟಿ ಬಾಂಬ್ ಸಿಡಿಸಿದ್ದಾರೆ. ಈ ಬಾರಿಯ ಬಾಂಬ್ ಇಂದಿಷ್ಟು ಸ್ಪೆಷಲ್ ಆಗಿದೆ.
ರೈಲ್ವೆ ಅಧಿಕಾರಿಗಳ ಸೋಗಿನಲ್ಲಿ ಮೈಸೂರಿನಲ್ಲಿ ತಂಗಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಡ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಅಕ್ಕಿ ಗಿರಣಿಗಳ ಮೇಲೆ ನಸುಕಿನ 4 ಗಂಟೆವರೆಗೆ ದಾಳಿ ನಡೆಸಿದ್ದಾರೆ. ಅಲ್ಲದೆ ಅಲ್ಲಿ ಸ್ಪೈ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂಬುವುದಾಗಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಅಲ್ಲದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ದೋಸ್ತಿ ಪಕ್ಷಗಳ ಕಾರ್ಯಕರ್ತರನ್ನು ಬೆದರಿಸಲು ಕೇಂದ್ರಸರ್ಕಾರವು ಐಟಿ ಅಧಿಕಾರಿಗಳನ್ನು ಬಳಸಿಕೊಂಡು ಈ ತಂತ್ರ ಮಾಡುತ್ತಿದೆ ಎಂದು ಕೂಡ ಅವರು ಆರೋಪಿಸಿದ್ದಾರೆ.
ಗುರುವಾರ ರಾಜ್ಯದಲ್ಲಿ ಕೆಲವು ಮುಖಂಡರ ಮೇಲೆ ಐಟಿ ದಾಳಿ ನಡೆಯಲಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದರು. 200-300 ಐಟಿ ಅಧಿಕಾರಿಗಳು ರಾಜ್ಯಕ್ಕೆ ಬರುತ್ತಿದ್ದಾರೆ. ಅವರನ್ನು ವಿಮಾನ ನಿಲ್ದಾಣದಿಂದ ಕರೆತರಲು ಕ್ಯಾಬ್ಗಳು ಕೂಡ ತಯಾರಾಗಿವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರ ಮಾತಿನಂತೆ ದಾಳಿ ಕೂಡ ನಡೆದಿದ್ದು ಜೆಡಿಎಸ್ ಮುಖಂಡರ ಮನೆಗಳನ್ನೇ ಐಟಿ ಟಾರ್ಗೆಟ್ ಮಾಡಿತ್ತು.
ಇದೀಗ ಮತ್ತೊಮ್ಮೆ ಸಿಎಂ ಐಟಿ ದಾಳಿ ಬಗ್ಗೆ ಮಾಹಿತಿ ನೀಡಿದ್ದು, ಈ ಸಲ ಯಾರಿಗೆ ಐಟಿ ಶಾಕ್ ತಗಲುತ್ತೇ ಅನ್ನುವುದು ಕುತೂಹಲದ ವಿಚಾರ.