ಚಿಕ್ಕಮಗಳೂರು, ಜೂ 04 (DaijiworldNews/MS): ಶಾಸಕರ ಅಭಿನಂದನಾ ಸಮಾರಂಭದಲ್ಲೇ ಚಾಕು ಇರಿದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.
ಮೃತ ಯುವಕ ನನ್ನು ವರುಣ್(28) ಎಂದು ಗುರುತಿಸಲಾಗಿದೆ.
ತರೀಕೆರೆ ಶಾಸಕ ಶ್ರೀನಿವಾಸ್ ಅವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಆರ್ಕೇಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರಕ್ಕೆ ಕಬಾಬ್ ಮೂರ್ತಿ ಹಾಗೂ ವರುಣ್ ಎಂಬುವವರ ಮಧ್ಯೆ ಗಲಾಟೆಯಾಗಿದೆ.
ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳು ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಬಳಿಕ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಕಬಾಬ್ ಮೂರ್ತಿ ವರುಣ್ಗೆ ಡ್ರ್ಯಾಗರ್ನಿಂದ ಇರಿದಿದ್ದಾನೆ.
ಘಟನೆಯಲ್ಲಿ ಮಂಜು ಹಾಗೂ ಸಂಜು ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.