ನವದೆಹಲಿ, ಜೂ 04 (DaijiworldNews/MS): ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ಕುಜ ದೋಷ ಇದೆಯೇ ಎಂಬುದನ್ನು ಖಚಿತಪಡಿಸುವಂತೆ ಲಖನೌ ವಿಶ್ವವಿದ್ಯಾಲಯದ ಜ್ಯೋತಿಷ ಶಾಸ್ತ್ರ ವಿಭಾಗಕ್ಕೆ ಸೂಚಿಸಿದ್ದ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶನಿವಾರ ತಡೆ ನೀಡಿದೆ.
ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರ ಪೀಠವು ಹೈಕೋರ್ಟ್ ಆದೇಶವು ಅಸಂಬದ್ಧ. ಪ್ರಕರಣದಲ್ಲಿ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದೆ.
ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹೊತ್ತ ಗೋವಿಂದ್ ರಾಜ್ ಎಂಬಾತ ಆಕೆಗೆ ಕುಜದೋಷ ಇರುವುದರಿಂದ ವಿವಾಹವಾಗುವುದಿಲ್ಲ ಎಂದು ವಂಚಿಸಿದ್ದ. ಆತನ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಲಖನೌ ಪೀಠ ಕುಜ ದೋಷ ಇದೆಯೇ ಇಲ್ಲವೇ ಎಂಬುವುದನ್ನು ಪರೀಕ್ಷಿಸುವಂತೆ ಸೂಚಿಸಿತ್ತು.
ಹೈಕೋರ್ಟ್ನ ನಿರ್ದೇಶನವು ಹಿಂದೂ ನಂಬಿಕೆ ಅವೈಜ್ಞಾನಿಕ ಮತ್ತು ಮೂಢನಂಬಿಕೆ ಎಂಬ ಕಾರಣಕ್ಕಾಗಿ ಅಲ್ಲ, ಆದರೆ ಅತ್ಯಾಚಾರ ಆರೋಪಿಯು ಸಂತ್ರಸ್ತೆಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರದ ಆರೋಪವನ್ನು ನಿರಾಕರಿಸಲು ಇದನ್ನು ಆಧಾರವಾಗಿ ಬಳಸಲು ಮುಂದಾದ ಬಗ್ಗೆ ಸುಪ್ರೀಂ ಗರಂ ಆಗಿದೆ. ಆರೋಪಿಯು ಮದುವೆಯ ಭರವಸೆ ನೀಡಿ ಅವಳೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ನಂತರ ಆಕೆಗೆ ಕುಜ ದೋಷವಿದೆ ಎಂದು ಮದುವೆಯಿಂದ ಹಿಂದೆ ಸರಿದಿದ್ದಾನೆ.
ಜ್ಯೋತಿಷ ಶಾಸ್ತ್ರ ವಿಜ್ಞಾನ ಎಂಬುವುದರಲ್ಲಿ ಸಂಶಯವಿಲ್ಲ, ಅದನ್ನು ಗೌರವಿಸುತ್ತೇವೆ. ಆದರೆ ಇಲ್ಲಿ ಈ ಪ್ರಕರಣಕ್ಕೆ ಇದು ಅನ್ವಯಿಸುವುದಿಲ್ಲ. ನಿರ್ದೇಶನವು ವಿಷಯಕ್ಕೆ ಸಂಬಂಧಿಸಿದ್ದಲ್ಲ ಮತ್ತು ಗೌಪ್ಯತೆಯ ಹಕ್ಕು ಮತ್ತು ಇತರ ಹಲವು ಅಂಶಗಳನ್ನು ಒಳಗೊಂಡಿರುತ್ತದೆ ಎಂದು ಪೀಠ ಹೇಳಿದೆ.
ಪ್ರಕರಣದ ಮುಂದಿನ ವಿಚಾರಣೆ ಜೂನ್ 26 ರಂದು ನಡೆಯಲಿದೆ.