ಕಲಬುರುಗಿ, ಜೂ 04 (DaijiworldNews/MS): ನಿಧಿ ಆಸೆಗಾಗಿ ದುಷ್ಕರ್ಮಿಗಳು ದೇಗುಲದಲ್ಲಿ ಶಿವಲಿಂಗವನ್ನೇ ಕಿತ್ತೆಸೆದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಳೆದ ರಾತ್ರಿ ಎನ್. ಸೂಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಲ್ಲಿಕಾರ್ಜುನ ದೇವಸ್ಥಾನದಲ್ಲಿರುವ ಶಿವಲಿಂಗದ ಅಡಿಭಾಗದಲ್ಲಿ ನಿಧಿ ಇರಬಹುದು ಎಂಬ ದುರಾಸೆಯಲ್ಲಿ ದುಷ್ಕರ್ಮಿಗಳು ಶಿವಲಿಂಗವನ್ನು ಕಿತ್ತು ನಿಧಿಗಾಗಿ ಅಗೆದು ಹುಡುಕಾಟ ನಡೆಸಿದ್ದಾರೆ. ದೇವಸ್ಥಾನದ ಕೆಳಗೆ ನಿಧಿ ಸಿಗುತ್ತದೆ ಅನ್ನೋ ಮೂಢನಂಬಿಕೆಯಿಂದ ಕೆಲವರು ಇಂತಹ ಕೃತ್ಯ ಎಸಗುತ್ತಾರೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ನಡೆದ ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಜನರು ಕಿಡಿಕಾರಿದ್ದು, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.