ಬೆಂಗಳೂರು, ಜೂ 04 (DaijiworldNews/SM): ಕೆಎಂಎಫ್ ರೈತರಿಗೆ ನೀಡುತ್ತಿದ್ದ ಹಾಲಿನ ಪ್ರೋತ್ಸಾಹಧನ ಕಡಿತಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಿದ್ದು, ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರವನ್ನು ಕಡಿತ ಮಾಡದಂತೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಮನ್ಮುಲ್ ಮತ್ತು ಬಮುಲ್ ರೈತರಿಗೆ ನೀಡುತ್ತಿದ್ದ ಹಾಲಿನ ಪ್ರೋತ್ಸಾಹಧನವನ್ನು ಕಡಿಮೆ ಮಾಡಿತ್ತು, ಉಚಿತ ಭಾಗ್ಯಗಳಿಗೆ ಹಣ ಹೊಂದಿಸಲು ಕಾಂಗ್ರೆಸ್ ಸರ್ಕಾರ ರೈತರ ಆದಾಯಕ್ಕೆ ಕತ್ತರಿ ಹಾಕಿದೆ ಎಂದು ವಿರೋಧ ಪಕ್ಷಗಳು ಕಿಡಿ ಕಾರಿದ್ದವು. ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಏಕಾಏಕಿ ದರ ಕಡಿಮೆ ಮಾಡುವಂತಿಲ್ಲ, ಈ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಸಬೇಕು, ಪ್ರೋತ್ಸಾಹಧನ ಕಡಿಮೆ ಮಾಡಿದರೆ ರೈತರಿಗೆ ತೊಂದರೆ ಆಗುತ್ತದೆ ಎಂದು ಸೂಚನೆ ಕೊಟ್ಟಿದ್ದಾರೆ.
ಬೇಸಿಗೆ ಕಾಲದಲ್ಲಿ ನೀಡಿದ್ದ ಪ್ರೋತ್ಸಾಹಧನ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಜಿಲ್ಲಾ ಹಾಲು ಒಕ್ಕೂಟ ಬೇಸಿಗೆಯಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರುಪಾಯಿ ವಿಶೇಷ ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು. ಬೇಸಿಗೆ ಸಂದರ್ಭದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಅದರಂತೆಯೇ ಏಪ್ರಿಲ್ 1ರಿಂದ ಮೇ 31ರವರೆಗೆ ವಿಶೇಷ ಪ್ರೋತ್ಸಾಹಧನ ನೀಡಿತ್ತು.