ಮಂಡ್ಯ, ಮಾ.31(AZM):ಮುಖ್ಯಮಂತ್ರಿಯಿಂದ ಆಡಳಿತದ ದುರುಪಯೋಗವಾಗುತ್ತಿದ್ದು, ಮಂಡ್ಯದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂದು ಸುಮಲತಾ ಅಂಬರೀಶ್ ಇಂದು ಆರೋಪಿಸಿದ್ದಾರೆ.
ಇಂದು ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮಂಡ್ಯ ಕ್ಷೇತ್ರವನ್ನು ಅತಿ ಸೂಕ್ಷ್ಮ ಎಂದು ಪ್ರಕಟಿಸಬೇಕು ಹಾಗೂ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶ ಮಾಡಿ ಜಿಲ್ಲಾ ಚುನಾವಣಾಧಿಕಾರಿಯನ್ನು ಬದಲಾವಣೆ ಮಾಡಬೇಕು ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕೆ. ನಾಮಪತ್ರ ಸಲ್ಲಿಸಿದ ದಿನ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ನಿಖಿಲ್ ಅವರ ಕ್ರಮಸಂಖ್ಯೆ 1 ಎಂದು ಅವತ್ತೇ ಪ್ರಕಟಿಸಿದ್ದರು. ನನ್ನ ಹೆಸರಿನಲ್ಲಿ ಮೂರು ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಕ್ರಮಸಂಖ್ಯೆ ನೀಡುವಲ್ಲಿ ಆಗಿರುವ ಲೋಪ ಪ್ರಶ್ನಿಸಿದರೆ ದೆಹಲಿಯತ್ತ ಕೈ ತೋರಿಸುತ್ತಾರೆ. ನನ್ನ ಹೆಸರು ಸುಮಲತಾ ಎ. ಎಂದು. ನನ್ನ ಕ್ರಮಸಂಖ್ಯೆ 20 ಆಗಿದೆ. 19 ರಿಂದ 20ರ ಕ್ರಮಸಂಖ್ಯೆ ವರೆಗೂ ಸುಮಲತಾ ಎಂಬ ಹೆಸರಿನ ಬೇರೆ ಮೂರು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತಪತ್ರದಲ್ಲಿ ನನ್ನ ಹೆಸರು ಸುಮಲತಾ ಅಂಬರೀಶ್ ಎಂದು ಬರಲಿದ್ದು, ಫೋಟೋ ಕೂಡ ಇರಲಿದೆ. ಜನರನ್ನು ಗೊಂದಲದಲ್ಲಿ ಸಿಲುಕಿಸಲು ಈ ರೀತಿಯ ಕುತಂತ್ರ ರಾಜಕಾರಣ ಮಾಡಲಾಗಿದೆ. ಇದರಿಂದ ಯಾವುದೇ ನಷ್ಟ ಆಗುವುದಿಲ್ಲ.
ನೇರ ಹೋರಾಟ ಮಾಡದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಪ್ರಮುಖ ಕರ್ತವ್ಯವಾದ ಚುನಾವಣೆಯಲ್ಲಿ ತಪ್ಪುಗಳಾಗಬಾರದು. ಆದರೆ, ಇಲ್ಲಿ ಅನ್ಯಾಯ ನಡೆಯುತ್ತಿದೆ. ನಮಗೆ ನ್ಯಾಯ ಸಿಗುವ ನಂಬಿಕೆ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಚುನಾವಣಾಧಿಕಾರಿಗಳ ಕಚೇರಿಯನ್ನು ತಮ್ಮ ಕಚೇರಿಯಂತೆ ನಡೆಸಿಕೊಳ್ಳುತ್ತಿದ್ದಾರೆ. ನಮ್ಮ ಆರೋಪಗಳನ್ನು ಆಧಾರರಹಿತ ಎನ್ನುತ್ತಿದ್ದಾರೆ. ಹಾಗಿದ್ದರೆ ಚುನಾವಣಾಧಿಕಾರಿಗಳು ನಾಮಪತ್ರ ಪರಿಶೀಲನೆ ಮಾಡಿದ ವಿಡಿಯೋ ಮಾಡಿದ ಸಲಕರಣೆಗಳನ್ನು ಮದುವೆ ಸಮಾರಂಭಕ್ಕೆ ಕಳುಹಿಸಲಾಗಿದೆ ಎಂದು ಹೇಳಿರುವುದು ತಮಾಷೆ ವಿಷಯವೇ? ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನಿಸಿದರು.