ಬೆಂಗಳೂರು, ಜೂ 06 (DaijiworldNews/MS): ಗೃಹಜ್ಯೋತಿ ಯೋಜನೆಯಡಿ ಬಾಡಿಗೆದಾರರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ . ಉಚಿತವಾಗಿ ನೀಡುತ್ತಿರುವುದು ಒಂದು RR ನಂಬರ್ಗೆ ಮಾತ್ರ ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಇದು ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪ್ರಯೋಜನ ದೊರೆಯವುದು ಡೌಟ್ ಎಂಬುದಾಗಿ ಹೇಳಲಾಗುತ್ತಿದೆ. ಇದು ಬಹಳಷ್ಟು ಗೊಂದಲಕ್ಕೆ ಕಾರಣವಾಗಿತ್ತು..
ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಕೆ.ಜೆ.ಜಾರ್ಜ್ ಅವರು, ಬಾಡಿಗೆದಾರರು ಅರ್ಜಿ ಸಲ್ಲಿಸುವಾಗ ಎಷ್ಟು ವರ್ಷದಿಂದ ಬಾಡಿಗೆಗೆ ಇದ್ದೇವೆ ಎಂಬ ದಾಖಲೆಗಳು ಇರಬೇಕು. ಮನೆ ಮಾಲೀಕ ತೆರಿಗೆ ಕಟ್ಟಿರಬೇಕು ಹಾಗೂ ಕರೆಂಟ್ ಬಿಲ್ ಮತ್ತು ಅಗ್ರಿಮೆಂಟ್ ಇರಬೇಕು. ಆಗ ಬಾಡಿಗೆದಾರರಿಗೂ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದಿದ್ದಾರೆ.
ಪ್ರಯೋಜನವನ್ನು ಪಡೆಯಲು ಬಯಸುವ ಗ್ರಾಹಕರು ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. 2022-2023ರ ಹಣಕಾಸು ವರ್ಷದಲ್ಲಿ 12 ತಿಂಗಳ ಸರಾಸರಿ ಬಳಕೆ ಮತ್ತು ಶೇಕಡಾ 10ರಷ್ಟು ಹೆಚ್ಚಿನ ವಿದ್ಯುತ್ ಬಳಕೆ 200 ಯೂನಿಟ್ ಗಳನ್ನು ಮೀರದಿದ್ದರೆ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. 200 ಯೂನಿಟ್ ದಾಟಿದ ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.