ವಿಜಯವಾಡ, ಮಾ31(AZM): ಹಣಕಾಸಿನ ಸರ್ಜಿಕಲ್ ಸ್ಟ್ರೈಕ್ ಮಾಡಿ, ಬಡತನವನ್ನು ಒಂದೇ ಬಾರಿಗೆ ದೇಶದಿಂದ ತೊಲಗಿಸುವ ಕೆಲಸ ಮಾಡುತ್ತೆಯಂತೆ ಕಾಂಗ್ರೆಸ್. ಹೌದು,ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಂತಹ ಒಂದು ಸರ್ಜಿಕಲ್ ಸ್ಟ್ರೈಕ್ ದೇಶದಲ್ಲಿ ನಡೆಯುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಇಂದು ವಿಜಯವಾಡದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಈ ಕುರಿತು ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಬಡವರ, ರೈತರ, ಜನ ಸಾಮಾನ್ಯರ ಮೇಲೆ ಆರ್ಥಿಕ ಯುದ್ಧ ಘೋಷಿಸಿದ್ದರು. ಅದಕ್ಕಾಗಿ ನೋಟು ಅಮಾನ್ಯೀಕರಣ, ಗಬ್ಬರ್ ಸಿಂಗ್ ಟ್ಯಾಕ್ಸ್ನಂತಹ ಜಿಎಸ್ಟಿ ತೆರಿಗೆ ಪದ್ಧತಿಗಳನ್ನು ಜಾರಿಗೆ ತಂದರು. ಆದರೆ ನಾವು ಆ ರೀತಿ ಮಾಡುವುದಿಲ್ಲ. ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿ,ದೇಶದಿಂದ ಬಡತನವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆಧಾರ್ ಸಂಖ್ಯೆ ಮತ್ತು ಇತರ ಅತ್ಯಾಧುನಿಕ ಮಾರ್ಗಗಳ ಮೂಲಕ ದೇಶದಲ್ಲಿ ಕಡು ಬಡವರನ್ನು ಗುರುತಿಸುತ್ತೇವೆ.
ಈವರೆಗಿನ ಅಂಕಿ ಅಂಶಗಳ ಪ್ರಕಾರ ಶೇ.20ರಷ್ಟು ಜನ ತಿಂಗಳಿಗೆ 12 ಸಾವಿರ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದ್ದಾರೆ. ಅವರಿಗೆ ತಿಂಗಳಿಗೆ ಆರು ಸಾವಿರ ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಎಂದು ಹೇಳಿದ ರಾಹುಲ್ ದೇಶದಲ್ಲಿ ಸುಮಾರು 5 ಕೋಟಿ ಕುಟುಂಬಗಳು ಇದರ ಸೌಲಭ್ಯ ಪಡೆಯಲಿದ್ದಾರೆ. ಮುಂದಿನ ಐದು ವರ್ಷದಲ್ಲಿ ಪ್ರತಿ ಕುಟುಂಬವು 3.60 ಲಕ್ಷ ಪಡೆಯಲಿದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದರು. ಅದನ್ನು ಈಡೇರಿಸಿಲ್ಲ. ಆದರೆ ನಾನು ಪ್ರಧಾನಿ ನರೇಂದ್ರ ಮೋದಿ ಅವರ ರೀತಿ ಸುಳ್ಳು ಹೇಳುವುದಿಲ್ಲ ಎಂದು ಹೇಳಿದರು.