ಮುಂಬೈ, ಜೂ 07 (DaijiworldNews/MS): ಹಾಸ್ಟೆಲ್ ನಲ್ಲಿ ವಾಸವಿದ್ದ 18 ವರ್ಷದ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ದೊರಕಿದ್ದು, ಆರೋಪಿ ಸೆಕ್ಯುರಿಟಿ ಗಾರ್ಡ್ ಮೃತದೇಹ ಹಾಸ್ಟೆಲ್ ಸಮೀಪದ ರೈಲ್ವೆ ಟ್ರಾಕ್ ಬಳಿ ಪತ್ತೆಯಾಗಿದೆ. ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಶಂಕಿಸಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿನಿ ಮಂಗಳವಾರ ಸಂಜೆ ನಾಪತ್ತೆಯಾದ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿತ್ತು. ಆದರೆ ಹುಡುಕಾಟದ ಬಳಿಕ ಹಾಸ್ಟೆಲ್ ನ ನಾಲ್ಕನೇ ಮಹಡಿಯಲ್ಲಿ ಕೊಠಡಿಯೊಂದರಲ್ಲಿ ವಿದ್ಯಾರ್ಥಿನಿ ಮೃತದೇಹ ಪತ್ತೆಯಾಗಿತ್ತು. ಪೊಲೀಸ್ ಪರಿಶೀಲನೆ ವೇಳೆ ಹಾಸ್ಟೆಲ್ ಕೊಠಡಿಯಲ್ಲಿ ಆಕೆಯನ್ನು ಬಟ್ಟೆಯ ತುಂಡಿನಿಂದ ಕತ್ತು ಹಿಸುಕಿ ಹತ್ಯೆ ಮಾಡಿರುವುದು ತಿಳಿದುಬಂದಿತ್ತು.
ಲಭಿಸಿದ ಸಾಕ್ಷ್ಯಧಾರ ಹಾಗೂ ಮೃತ ವಿದ್ಯಾರ್ಥಿನಿಯ ಸಂಬಂಧಿಕರು ನೀಡಿದ ದೂರಿನಂತೆ ಹಾಸ್ಟೆಲ್ ಸೆಕ್ಯುರಿಟಿ ಗಾರ್ಡ್ ವಿರುದ್ದ ಎಫ್ಐಆರ್ ದಾಖಲಾಗಿತ್ತು.
ತನಿಖೆ ವೇಳೆ ಪೊಲೀಸರಿಗೆ ಹಾಸ್ಟೆಲ್ ಸೆಕ್ಯುರಿಟಿ ಗಾರ್ಡ್ ಓಂ ಪ್ರಕಾಶ್ ಕನೌಜಿಯಾ ಎಂಬಾತ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಆದರೆ ಆತನ ಪತ್ತೆಗಾಗಿ ಶೋಧ ನಡೆಸಿದಾಗ ಚಾರ್ನಿ ರೋಡ್ ಸ್ಟೇಷನ್ ಬಳಿಯ ಟ್ರಾಕ್ ಬಳಿ ಮೃತದೇಹ ಪತ್ತೆಯಾಗಿದೆ. ಮುಂದಿನ ತನಿಖೆಗಾಗಿ ಪೊಲೀಸರು ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.