ನವದೆಹಲಿ, ಜೂ 08 (DaijiworldNews/MS): ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕಿಯರಲ್ಲಿ ಒಬ್ಬರಾಗಿದ್ದ ಜನಪ್ರಿಯ ಆ್ಯಂಕರ್ ಗೀತಾಂಜಲಿ ಅಯ್ಯರ್(76) ಅವರು ಬುಧವಾರ ನವದೆಹಲಿಯ ಮನೆಯಲ್ಲಿ ನಿಧನರಾಗಿದ್ದಾರೆ.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅಯ್ಯರ್ ಅವರು ಬುಧವಾರ ಸಂಜೆ ಎಂದಿನಂತೆ ವಾಕಿಂಗ್ ಮುಗಿಸಿ ಮನೆಗೆ ಬಂದಿದ್ದರು, ನಂತರ ಏಕಾಏಕಿ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕೋಲ್ಕತ್ತಾದ ಲೊರೆಟೊ ಕಾಲೇಜಿನಿಂದ ಪದವಿ ಪಡೆದ ಅಯ್ಯರ್ 1971 ರಲ್ಲಿ ದೂರದರ್ಶನದಲ್ಲಿ ವೃತ್ತಿ ಜೀವನ ಆರಂಭಿಸಿದರು. ಅವರು 30 ವರ್ಷಗಳಷ್ಟು ದೀರ್ಘ ಕಾಲ ದೂರದರ್ಶನದ ಸುದ್ದಿ ನಿರೂಪಕಿಯಾಗಿದ್ದರು.ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪತ್ರಿಕೋದ್ಯಮ ಕ್ಷೇತ್ರದಲ್ಲೂ ಹಲವು ದಾಖಲೆಗಳನ್ನು ಸ್ಥಾಪಿಸಿದ್ದಾರೆ.
ಅಯ್ಯರ್ ಅವರ ಕಾರ್ಯ ಕ್ಷಮತೆ, ಸಾಧನೆ ಮತ್ತು ಪತ್ರಿಕೋದ್ಯಮದಲ್ಲಿ ಅವರು ನೀಡಿದ ಕೊಡುಗೆಗಾಗಿ 1989ರಲ್ಲಿ ಅತ್ಯುತ್ತಮ ಮಹಿಳೆಯರಿಗಾಗಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ಅವರನ್ನು ಅರಸಿ ಬಂದಿತ್ತು.
ಅಯ್ಯರ್ ಪುತ್ರ ಮತ್ತು ಪುತ್ರಿ ಪಲ್ಲವಿ ಅಯ್ಯರ್ ಅವರನ್ನು ಅಗಲಿದ್ದಾರೆ.