ನವದೆಹಲಿ, ಜೂ 09 (DaijiworldNews/HR): ಮೋದಿ ಸರ್ಕಾರ ದೇಶದ ರೈತರಿಗೆ ಸುಳ್ಳು ಭರವಸೆಗಳನ್ನು ನೀಡಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕನಿಷ್ಠ ಬೆಂಬಲ ಬೆಲೆಯನ್ನು 'ವೆಚ್ಚ + 50 ಪ್ರತಿಶತ ಲಾಭ'ಕ್ಕೆ ನಿಗದಿಪಡಿಸುವುದು ಮತ್ತು 2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಎಂದು ಮೋದಿ ಸರ್ಕಾರ ಭರವಸೆ ನೀಡಿದ್ದು, ಇದೀಗ ಈ ಎರಡೂ ಭರವಸೆಗಳು ಸುಳ್ಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಪಿಆರ್ ಹಸಿವಿನಿಂದ ಕಂಗೆಟ್ಟಿರುವ ಮೋದಿ ಸರ್ಕಾರವು ಖಾರಿಫ್ ಬೆಳೆಗೆ ಎಂಎಸ್ಪಿ ಹೆಚ್ಚಿಸುತ್ತೇವೆ. ಆದರೆ ಎಂಎಸ್ಪಿ ದರದಲ್ಲಿ ರೈತರಿಂದ ಬೆಳೆಗಳನ್ನು ಖರೀದಿಸುತ್ತಿಲ್ಲ. ಕೃಷಿಗೆ ಬಜೆಟ್ ಕಡಿತಗೊಳಿಸಲಾಗಿದೆ ಎಂದಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂಬತ್ತು ವರ್ಷ ಪೂರೈಸಿದ್ದು, ಈ ಒಂಬತ್ತು ವರ್ಷವು ಸರ್ಕಾರ 62 ಕೋಟಿ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಕೃಷಿ ಬಜೆಟ್ನಲ್ಲಿ ಕಡಿತ ಮಾಡಲಾಗಿದೆ. 1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿಯ ಭರವಸೆಯ ಹೊರತಾಗಿಯೂ ಮೂರು ವರ್ಷಗಳಲ್ಲಿ ಕೇವಲ 12,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ಆರೋಪಿಸಿದ್ದಾರೆ.