ನವದೆಹಲಿ,ಜೂ 10 (DaijiworldNews/MS): ಬಿಜೆಪಿ ಸಂಸದ ಹಾಗೂ ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಕುಸ್ತಿಪಟುಗಳಿಗೆ ನೀಡುತ್ತಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಅಂತಾರಾಷ್ಟ್ರೀಯ ರೆಫ್ರಿ ಜಗ್ಬೀರ್ ಸಿಂಗ್ ಹೇಳಿಕೆಯಿಂದ ಮತ್ತಷ್ಟು ಪುಷ್ಟಿ ಸಿಕ್ಕಿದೆ.
2013ರಿಂದ ಹಲವಾರು ಸಂದರ್ಭಗಳಲ್ಲಿ ಬ್ರಿಜ್ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಅಂತಾರಾಷ್ಟ್ರೀಯ ರೆಫರಿ ಜಗ್ಬೀರ್ ಸಿಂಗ್ ಅವರು ಹೇಳಿದ್ದಾರೆ.
ನಾನು 2007 ರಿಂದ ಯುಡಬ್ಲ್ಯುಡಬ್ಲ್ಯೂ ರೆಫರಿ ಆಗಿದ್ದೇನೆ ಮತ್ತು ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸುವ ಮೊದಲೂ ನಾನು ರೆಫರಿಯಾಗಿದ್ದೇನೆ. ಬಹಳ ಹಿಂದಿನಿಂದಲೂ ನನಗೆ ಬ್ರಿಜ್ ಭೂಷಣ್ ಬಗ್ಗೆ ತಿಳಿದಿದೆ. ಬ್ರಿಜ್ ಭೂಷಣ್ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಹುಡುಗಿಯರು ಆತನ ವಿರುದ್ಧ ದೂರುಗಳನ್ನು ದಾಖಲಿಸುವವರೆಗೆ ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆ ದೃಶ್ಯಗಳನ್ನು ನೋಡಿ ನನಗೆ ಬೇಸರವಾಯಿತು" ಎಂದು ಅವರು ಹೇಳಿದ್ದಾರೆ.
ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತ ಹಲವು ಅಗ್ರ ಕುಸ್ತಿಪಟುಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.