ಬೆಂಗಳೂರು,ಜೂ 10 (DaijiworldNews/MS): ನೂತನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ "ಶಕ್ತಿ ಯೋಜನೆ" ಭಾನುವಾರ ಚಾಲನೆ ದೊರೆಯಲಿದ್ದು, ಈ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸುವುದಿಲ್ಲ ಎಂದು ತಿಳಿದುಬಂದಿದೆ.
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಿಸಿ ಸರ್ಕಾರ ಬಿಡುಗಡೆ ಮಾಡಿರುವ ಆಹ್ವಾನ ಪತ್ರಿಕೆಯಲ್ಲಿ ಉಪ ಮುಖ್ಯಮಂತ್ರಿ ಹೆಸರೂ ಇದೆ.
ಆದರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಮಧ್ಯಪ್ರದೇಶದ ಉಜ್ಜೈನಿ ಸೇರಿದಂತೆ ಕೆಲವು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ವಿಶೇಷ ವಿಮಾನದಲ್ಲಿ ನೇರವಾಗಿ ಗ್ವಾಲಿಯರ್ಗೆ ತೆರಳಲಿದ್ದು, ಅಲ್ಲಿಂದ ದಾಟಿಯಾಗೆ ಹೋಗಿ ಬಾಗ್ಲಾಮುಖಿ-ಪೀತಂಬರ ಪೀಠದಲ್ಲಿ ನಡೆಯುವ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಂದ ಅವರು ಇಂದೋರ್ಗೆ ಬಂದು ಉಜ್ಜೈನಿಗೆ ಭೇಟಿ ನೀಡುತ್ತಾರೆ. ಭಾನುವಾರ ಬೆಳಗ್ಗೆ ಮಹಾಕಾಳೇಶ್ವರ ಮಂದಿರದಲ್ಲಿ ನಡೆಯಲಿರುವ ಭಸ್ಮಾರತಿ ಪೂಜೆಯಲ್ಲಿ ಭಾಗಿಯಾಗಿ ಬಳಿಕ ಕಾಲಭೈರವ ದೇವಾಲಯಕ್ಕೆ ಭೇಟಿ ಅಲ್ಲಿಂದ ರಾಜ್ಯಕ್ಕೆ ಸಂಜೆ ವಾಪಾಸ್ಸಾಗಲಿದ್ದಾರೆ. ಹೀಗಾಗಿ ಅವರು ಶಕ್ತಿ ಯೋಜನೆಯ ಉದ್ಘಾಟನೆ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.