ಬೆಂಗಳೂರು, ಜೂ13 (DaijiworldNews/HR): ಕೆಲಸ ಮುಗಿಸಿಕೊಂಡು ರಾತ್ರಿ ವೇಳೆಯಲ್ಲಿ ಆಟೊ ರಿಕ್ಷಾದಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಬಳಿ ಹೆಚ್ಚಿನ ಹಣ ಕೇಳಿದ ಚಾಲಕನೊಂದಿಗೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಯಾಣಿಕರು ಮತ್ತು ಚಾಲಕನ ನಡುವೆ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರು ಪ್ರಯಾಣಿಕರಿಗೆ ಆಟೊ ಚಾಲಕ ಚಾಕುವಿನಿಂದ ಇರಿದಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ.
ಮೃತನನ್ನು ಅಸ್ಸಾಂ ಮೂಲದ ಅಹ್ಮದ್ (28) ಮತ್ತು ಗಾಯಗೊಂಡಿರುವ ಮತ್ತೊಬ್ಬ ಯುವಕ ಅಯೂಬ್ (26) ಎಂದು ಗುರುತಿಸಲಾಗಿದೆ.
ಇನ್ನು ಇವರಿಬ್ಬರೂ ಅಣ್ಣ-ತಮ್ಮಂದಿರಾಗಿದ್ದು, ಸೋಮವಾರ ರಾತ್ರಿ ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ ಬಳಿ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಟೊರಿಕ್ಷಾ ಚಾಲಕ ಅಶ್ವಥ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.