ನವದೆಹಲಿ, ಜೂ13 (DaijiworldNews/HR): ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡ 70 ಸಾವಿರ ನೇಮಕಾತಿ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ವಿತರಿಸಿದ್ದಾರೆ.
70 ಸಾವಿರ ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೋಜ್ ಗಾರ್ ಮೇಳದಲ್ಲಿ ವಿತರಿಸಿ ಮಾತನಾಡಿದ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಪ್ರೋತ್ಸಾಹಿಸುವ ಮೂಲಕ ವಂಶಪಾರಂಪರಿಕ ಪಕ್ಷಗಳು ಯುವಕರಿಗೆ ದ್ರೋಹ ಬಗೆದಿದ್ದು, ಈ ಹಿಂದೆ ನೇಮಕಾತಿ ಪ್ರಕ್ರಿಯೆಯು ಒಂದರಿಂದ ಒಂದೂವರೆ ವರ್ಷ ತೆಗೆದುಕೊಳ್ಳುತ್ತಿತ್ತು, ಆದರೆ ಈಗ ಅದು ಪಾರದರ್ಶಕವಾಗಿ ಕೆಲವೇ ತಿಂಗಳಲ್ಲಿ ಮುಗಿಯುತ್ತದೆ ಎಂದರು.
ಇನ್ನು ವಂಶಪಾರಂಪರಿಕ ರಾಜಕೀಯ ಪಕ್ಷಗಳು ಎಲ್ಲಾ ವ್ಯವಸ್ಥೆಗಳಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಹೇಗೆ ಉತ್ತೇಜಿಸಿದವು ಎಂಬುದನ್ನು ನಾವು ನೋಡಿದ್ದೇವೆ. ಸರ್ಕಾರಿ ಉದ್ಯೋಗದ ವಿಷಯ ಬಂದಾಗ, ಈ ಪಕ್ಷಗಳು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿದವು. ಈ ವಂಶಪಾರಂಪರಿಕ ಪಕ್ಷಗಳು ಕೋಟಿಗಟ್ಟಲೆ ಯುವಕರಿಗೆ ದ್ರೋಹ ಬಗೆದಿವೆ ಎಂದಿದ್ದಾರೆ.