ನವದೆಹಲಿ, ಜೂ 15 (DaijiworldNews/HR): ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 1,000 ಪುಟಗಳ ಆರೋಪಪಟ್ಟಿಯನ್ನು ದೆಹಲಿ ಪೊಲೀಸರು ಸಲ್ಲಿಸಿದ್ದಾರೆ.
ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿ ರೋಸ್ ಅವೆನ್ಯೂ ಕೋರ್ಟ್ಗೆ ಸಲ್ಲಿಕೆಯಾಗಿದ್ದು ಜುಲೈ 4 ರಂದು ವಿಚಾರಣೆ ನಡೆಯಲಿದೆ ಎಂದು ವರದಿಯಾಗಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಫೋಕ್ಸೊ ಪ್ರಕರಣ ರದ್ದು ಮಾಡುವಂತೆ ಪೊಲೀಸರು ಚಾರ್ಜ್ಶೀಟ್ ನಲ್ಲಿ ಶಿಫಾರಸ್ಸು ಮಾಡಿದ್ದು, ಈ ಬಗ್ಗೆ 500 ಪುಟಗಳ ವರದಿ ನೀಡಿರುವ ಪೊಲೀಸರು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಯಾವುದೇ ಸಾಕ್ಷ್ಯ, ಪುರಾವೆಗಳು ಲಭ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕುಸ್ತಿಪಟುಗಳ ದೂರಿನ ಮೇರೆಗೆ ದಾಖಲಿಸಿದ ಎಫ್ಐಆರ್ ಆಧರಿಸಿ ನಡೆಸಿದ ತನಿಖೆ ಬಳಿಕ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 354, 354 A, 354 D ಮತ್ತು IPC ಸೆಕ್ಷನ್ 109/ 354/354 A/506ರ ಅಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದರು.