ಬೆಂಗಳೂರು, ಜೂ. 18 (DaijiworldNews/SM): ವಿದ್ಯುತ್ ದರ ಏರಿಕೆ ಕುರಿತು ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಜೂನ್ 22 ರಂದು ಒಂದು ದಿನ ಕರ್ನಾಟಕ ಬಂದ್ ge ಕರೆ ನೀಡಿದೆ. ಎರಡು ತಿಂಗಳ ಹೆಚ್ಚುವರಿ ದರ ಸೇರಿ ಒಂದೇ ಬಿಲ್ ಬಂದಿದ್ದರಿಂದ ಈ ತಿಂಗಳು ವಿದ್ಯುತ್ ಶುಲ್ಕದಲ್ಲಿ ಹೆಚ್ಚಳವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮುಂದಿನ ತಿಂಗಳಿನಿಂದ ಒಂದೇ ತಿಂಗಳ ಬಿಲ್ ಬರುವುದರಿಂದ ಎಲ್ಲವೂ ಸರಿಯಾಗಲಿದೆ. ಪ್ರತಿಭಟನೆ ನಡೆಸಲು ತೀರ್ಮಾನಿಸಿರುವ ಎಫ್ ಕೆಸಿಸಿಯವರ ಜೊತೆಗೆ ಸಂಬಂಧಿಸಿದ ಸಚಿವರು ಮಾತನಾಡಿ ಮನವೊಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಇದೇ ವೇಳೆ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅಕ್ಕಿ ಕೊಡಿಸುವ ಕೆಲಸ ಮಾಡಲಿ, ಬಡವರ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಏಕೆ ಅಡ್ಡಿಪಡಿಸಬೇಕು, ದ್ವೇಷ ರಾಜಕಾರಣ ಯಾಕೆ ಮಾಡುತ್ತಿದೆ ಎಂದು ಪ್ರಶ್ನಿಸಿದರು.