ನಾಗ್ಪುರ, ಜೂ 19 (DaijiworldNews/MS): ಮಹಾರಾಷ್ಟ್ರದ ನಾಗ್ಪುರದಲ್ಲಿ ಮೂವರು ಮಕ್ಕಳು ನಾಪತ್ತೆಯಾದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ನಾಪತ್ತೆಯಾದ ಒಂದು ದಿನದ ನಂತರ ಭಾನುವಾರ ಸಂಜೆ ಎಸ್ಯುವಿ ಕಾರ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ಮಕ್ಕಳನ್ನು ಫಾರುಕ್ ನಗರದ ನಿವಾಸಿಗಳಾದ ತೌಫೀಕ್ ಫಿರೋಜ್ ಖಾನ್ (4), ಅಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಎಂದು ಗುರುತಿಸಲಾಗಿದೆ.
ತಮ್ಮ ಮನೆಯಿಂದ 50 ಮೀಟರ್ ದೂರದಲ್ಲಿ ನಿಂತಿದ್ದ ವಾಹನದಲ್ಲಿ ಸಹೋದರ-ಸಹೋದರಿ ಸೇರಿದಂತೆ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ, ಕಾನ್ಸ್ಟೆಬಲ್ ಒಬ್ಬರು ಮನೆಗಳ ಬಳಿ ಎಸ್ಯುವಿ ನಿಲ್ಲಿಸಿರುವುದನ್ನು ನೋಡಿದಾಗ ಅದರೊಳಗೆ ಮೂವರು ಮಕ್ಕಳ ಶವಗಳು ಪತ್ತೆಯಾಗಿವೆ.
ಘಟನಾ ಸ್ಥಳದ ಬಳಿ ಕಾರು ರಿಪೇರಿ ಗ್ಯಾರೇಜ್ ಇದೆ. ಆ ಗ್ಯಾರೇಜಿನಲ್ಲಿ ರಿಪೇರಿಗೆ ಬಂದಿದ್ದ ಇಕೋಸ್ಪೋರ್ಟ್ ಕಾರು ನಿಂತಿದ್ದು ವಿಂಡೋ ಗ್ಲಾಸ್ಗೆ ಕಡು ಕಪ್ಪು ಫಿಲ್ಮ್ (ಟಿಂಟೆಡ್ ಗ್ಲಾಸ್ )ಹಾಕಲಾಗಿತ್ತು. ಮೂವರು ಮಕ್ಕಳು ಆಟವಾಡುತ್ತಾ ಕಾರಿನಲ್ಲಿ ಕುಳಿತು ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ಮೂವರೂ ಬಿಸಿಗಾಳಿ ಮತ್ತು ಉಸಿರುಗಟ್ಟುವಿಕೆಯಿಂದ ಮೃತಪಟ್ಟಿರಬಹುದು ಎಂಬುವುದು ಪ್ರಾಥಮಿಕ ಊಹೆಯಾಗಿದೆ.
ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಕ್ಕಳು ಪಕ್ಕದ ಪಾರ್ಕ್ ಗೆ ಹೋಗಿದ್ದು, ಶನಿವಾರ ಸಂಜೆಯಾದರೂ ವಾಪಸ್ ಬಾರದೇ ಇದ್ದಾಗ ಪೊಲೀಸರಿಗೆ ದೂರು ನೀಡಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು.
ಮಾಹಿತಿ ತಿಳಿದ ತಕ್ಷಣ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಸೇರಿದಂತೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.