ಬೆಂಗಳೂರು, ಜೂ 19 (DaijiworldNews/MS): ಮಹಿಳೆಯರಿಗಾಗಿ ಸರ್ಕಾರ ಪ್ರಾರಂಭಿಸಿರುವ ಉಚಿತ ಬಸ್ ಪ್ರಯಾಣ ವ್ಯವಸ್ಥೆಯು ಇನ್ನೊಂದೆಡೆ ದುರುಪಯೋಗವಾಗುತ್ತಿರುವುದಕ್ಕೆ ಸಾಕಷ್ಟು ಉದಾಹರಣೆ ವರದಿಯಾಗುತ್ತಿವೆ. ಅದರಲ್ಲಿಯೂ ಹೆಣ್ಣು ಮಕ್ಕಳು ಕ್ಷುಲ್ಲಕ ಕಾರಣಗಳಿಗೆ ನಾಪತ್ತೆಯಾಗುತ್ತಿದ್ದು, ಪೋಷಕರಲ್ಲಿ ನಾನಾ ರೀತಿಯ ಆತಂಕಕ್ಕೆ ಕಾರಣವಾಗುತ್ತಿದೆ.
ಬೆಂಗಳೂರಿನ ಕೋಣನಕುಂಟೆಯ 10 ಮತ್ತು 9ನೇ ತರಗತಿ ಓದುತ್ತಿರುವ ಇಬ್ಬರು ಸಹೋದರಿಯರು ಬಾಲಕಿಯರು ದಿಢೀರ್ ಕಣ್ಮರೆ ಆಗಿದ್ದರಿಂದ ಆತಂಕಗೊಂಡ ಪೋಷಕರು ಕೋಣನಕುಂಟೆ ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ
ಚಾಕ್ಲೇಟ್ ವಿಚಾರವಾಗಿ ತಂದೆ ಜತೆ ಜಗಳವಾಡಿ ಎರಡು ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಮೊದಲು ಚಾಕ್ಲೇಟ್ ತಿಂದು ಆ ಬಳಿಕ ಅಂಗಡಿಯವರಿಗೆ ಹಣಕೊಡಬೇಕು ಎಂದು ತಂದೆ ಬಳಿ ಕೇಳಿದ್ದಾರೆ. ಈ ವೇಳೆ ತಂದೆ, ತಮ್ಮ ಅನುಮತಿಯಿಲ್ಲದೇ ಅಂಗಡಿಗೆ ಹೋಗಿದ್ದಕ್ಕೆ ಮಕ್ಕಳಿಗೆ ಬೈದಿದ್ದಾರೆ. ಅಲ್ಲದೆ ನಾನು ಹಣ ಕೊಡಲ್ಲ ಎಂದು ಹೇಳಿದ್ದಾರೆ.
ನಾಪತ್ತೆಯಾದ ಮಕ್ಕಳನ್ನು ಪೊಲೀಸರು ಧರ್ಮಸ್ಥಳದಲ್ಲಿ ಪತ್ತೆ ಮಾಡಿದ್ದಾರೆ. ಮಕ್ಕಳು ಫ್ರೀ ಟಿಕೆಟ್ ಪಡೆದು ಬಸ್ ಹತ್ತಿದ್ದರು.