ಬೆಂಗಳೂರು,ಜೂ 19 (DaijiworldNews/MS): ಮುಂಗಾರು ಆರಂಭವಾಗಿ 3 ವಾರ ಕಳೆದರೂ ನಿರೀಕ್ಷಿತ ಮಳೆ ಬೀಳದ ಹಿನ್ನೆಲೆ ರಾಜ್ಯಕ್ಕೆ ಬರಗಾಲದ ಭೀತಿ ಎದುರಾಗಿದೆ.
ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ, 11 ಜಿಲ್ಲೆಗಳಲ್ಲಿ ಶೇ.29ರಿಂದ ಶೇ.59ರಷ್ಟು ಮಳೆ ಕೊರತೆ ಇದೆ. ಜೂ.1ರಿಂದ ಸರಾಸರಿ 100ಮಿಮೀ. ಮಳೆಯಾಗಬೇಕಿದ್ದು, ಕೇವಲ 30ಮಿಮೀ. ಮಾತ್ರ ಮಳೆಯಾಗಿದೆ. ಅಲ್ಲದೆ ಸುಮಾರು 20 ಜಿಲ್ಲೆಗಳಲ್ಲಿ ಅತ್ಯಲ್ಪ ಪ್ರಮಾಣದ ಮಳೆಯಾಗಿದೆ.
ಮಳೆ ಬಾರದೆ ರೈತಾಪಿ ವರ್ಗ ಮುಗಿಲಿನತ್ತ ನೋಡುವ ಪರಿಸ್ಥಿತಿ ಎದುರಾಗಿದೆ. ಮಳೆ ಕೊರತೆಯಿಂದಾಗಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೂ ಹಿನ್ನಡೆಯಾಗಿದೆ ಎನ್ನುತ್ತಾರೆ ತಜ್ಞರು.
ಕಳೆದ ವಾರವೇ ಕೇರಳಕ್ಕೆ ಮುಂಗಾರು ಪ್ರವೇಶ ಆಗಿದ್ದರೂ ಕೂಡಾ ಅಲ್ಲಿಯೂ ಮುಂಗಾರಿನ ಅಬ್ಬರ ಕಾಣಸಿಗುತ್ತಿಲ್ಲ. ನಮ್ಮ ರಾಜ್ಯದಲ್ಲೂ ಮಾನ್ಸೂನ್ ಪ್ರವೇಶದ ಬಳಿಕ ಆಗಬೇಕಾಗಿದ್ದ ವ್ಯಾಪಕವಾಗಿ ಮಳೆ ಕಾಣಿಸುತ್ತಿಲ್ಲ. ಅದರಲ್ಲೂ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಅಬ್ಬರದ ಮಳೆ ಕಣ್ಮರೆಯಾಗಿದೆ.